ಬೆಂಗಳೂರುಕರಾಡ ಸಮಾಜದ ವತಿಯಿಂದ ನಡೆಸಲ್ಪಡುವ ೨೦೨೪ನೇ ವರ್ಷದ (ಕ್ರೋಧಿ ನಾಮ ಸಂವತ್ಸರದ) ಉತ್ಸರ್ಜನ - ಉಪಾಕರ್ಮ ಕಾರ್ಯಕ್ರಮವು ೧೯-ಆಗಸ್ಟ್-೨೦೨೪(ಕ್ರೋಧಿ ನಾಮ ಸಂವತ್ಸರೇ, ದಕ್ಷಿಣಾಯನೇ ,ವರ್ಷ ಋತೌ ,ಶ್ರಾವಣ ಮಾಸೇ ,ಶುಕ್ಲ ಪಕ್ಷೇ ,ಪೂರ್ಣಮ್ಯಾಮ್ ತಿಥೇ ,ಇಂದುವಾಸರೇ,ಶ್ರವಣಾ ನಕ್ಷತ್ರೇ ) ಶ್ರೀ ಬೆಳ್ಳೆಚ್ಚಾಳು ಪ್ರಕಾಶ ಭಟ್ ಹಾಗೂ ಶ್ರೀ ಅಭಿಷೇಖ ಭಟ್ ಚೇರ್ಕುಡ್ಲು ಇವರುಗಳ ಆಚಾರ್ಯತ್ವದಲ್ಲಿ ಸಕಲ ವಿಧಿ ವಿಧಾನಗಳೊಂದಿಗೆ ನಡೆಯಿತು.
ಕುಲದೇವತಾ ಸ್ಮರಣೆ, ಗುರುಹಿರಿಯರ, ಗ್ರಾಮ ದೇವತೆಯ, ವಾಸ್ತು ದೇವತೆಯ ಸ್ಮರಣೆಯಿಂದ ಆರಂಭ ಗೊಂಡ ಕಾರ್ಯಕ್ರಮವು, ಶ್ರೀ ಗುರು ದೇವತಾ ಪೂಜೆ, ವಿಘ್ನ ವಿನಾಶಕ ಗಣಪತಿ ಪೂಜೆ, ಪುಣ್ಯಾಹ ವಾಚನಾದಿಗಳಿಂದ ಆರಂಭವಾಗಿ, ಸಪ್ತರ್ಷಿ ಪೂಜನ, ಉತ್ಸರ್ಜನ ಹೋಮ, ಉಪಾಕರ್ಮ ಹೋಮ, ದೇವ, ಋಷಿ, ಪಿತೃ ತರ್ಪಣಗಳ ಬಳಿಕ ಹೊಸ ಯಜ್ನೋಪವೀತ ಧಾರಣೆ ನಡೆಯಿತು.
ನಾವು ಚಿಕ್ಕವರಿದ್ದಾಗ ನಾವು ತಿಳಕೊಂಡಿದ್ದ (ಅಥವಾ ಇತ್ತೀಚೆ ವರೆಗೆ - ಕಳೆದ ೩ ವರ್ಷದ ವರೆಗೆ)ಉಪಾಕರ್ಮ ವೆಂದರೆ ಜನಿವಾರ ಬದಲಾಯಿಸುವುದು. ಮಾಮೂಲಾಗಿ ಜನಿವಾರ ತುಂಡಾದಾಗ ಹೊಸ ಜನಿವಾರ ಹಾಕುವಂತೆ, ಗಾಯತ್ರಿ ಮಂತ್ರ ಹೇಳಿ "ಯಜ್ನೋಪವೀತಂ ಪರಮಂ ಪವಿತ್ರಂ" ಎಂಬ ಮಂತ್ರದೊಂದಿಗೆ ಹೊಸ ಜನಿವಾರ ಹಾಕುವುದು ಎಂದು ಕೊಂಡಿದ್ದೆವು.
ಆದರೆ ಉಪಾಕರ್ಮಕ್ಕೆ ಇಷ್ಟೊಂದು ಮಹತ್ವ ಇದೆ, ಇಷ್ಟೊಂದು ವಿಧಿ ವಿಧಾನಗಳಿವೆ ಎಂದು ತಿಳಿದದ್ದೇ ಮೂರು ವರ್ಷದ ಮೊದಲು ಪ್ರಕಾಶಣ್ಣ ನಡೆಸಿಕೊಟ್ಟ ಉಪಾಕರ್ಮಕ್ಕೆ ಹೋದಾಗಲೇ. ಬಹುಷಃ ಅಲ್ಲಿಯ ವರೆಗೆ ನಮಗೆ ವೇದ ಮಂತ್ರಗಳನ್ನು ಕೊಟ್ಟ ಋಷಿಗಳಿಗಾಗಲೀ, ಛಂದೋ ದೇವತೆಗಳಿಗಾಗಲೀ ಮಂತ್ರ ದೇವತೆಗಳಿಗಾಗಲಿ ನಾವು ಕೃತಜ್ಞರಾದ ದಿನವಿರಲಿಲ್ಲ, ಅಥವಾ ಅವರಿಂದ ಉಪಕೃತರಾದ ನಾವು ಅವರನ್ನು ಜ್ಞಾಪಿಸಿದ ದಿನವಿರಲಿಲ್ಲ. ಹಾಗಾಗಿ ಈ ಉಪಾಕರ್ಮದ ದಿನ ಬಹಳ ಸೂಕ್ತ ಹಾಗೂ ಮಹತ್ವದ್ದು ಎನ್ನಿಸಿತು.
ಪ್ರಕಾಶಣ್ಣ ಹೇಳಿದಂತೆ, ಉತ್ಸರ್ಜನ ಎಂಬುದು ವಾರ್ಷಿಕ ವಿದ್ಯಾಭ್ಯಾಸದ ಆರು ತಿಂಗಳ ಬಳಿಕ ಕಲಿತ ವಿದ್ಯೆಯನ್ನು ಮನನ ಮಾಡಿಕೊಂಡು ಅಂತಸ್ಥ ವಾಗಿಸುವ ಘಟ್ಟ, ಹಾಗೂ ಉಪಾಕರ್ಮವೆಂಬುದು, ವಾರ್ಷಿಕ ವಿದ್ಯಾಭ್ಯಾಸದ ಆರಂಭಿಕ ಘಟ್ಟ. ಈ ಸಮಯದಲ್ಲಿ ನಮ್ಮ ಗುರುಗಳನ್ನು, ಋಷಿ ಮುನಿಗಳನ್ನು ಜ್ಞಾಪಿಸಿಕೊಳ್ಳುವುದು ಅದೆಷ್ಟು ಸೂಕ್ತ.
ಅಂತೆಯೇ ನಮ್ಮನ್ನಗಲಿದ ಹಿರಿಯರಿಗೆ, ಬಂಧು ಬಾಂಧವರಿಗೆ ಗುರು ಹಿರಿಯರಿಗೆ, ಮಿತ್ರರಿಗೆ, ನಮ್ಮ ಒಡೆಯರಿಗೆ ಜಲ ತರ್ಪಣ ಕೊಡುವ ಕಾರ್ಯ ಅದೆಷ್ಟು ಅರ್ಥಪೂರ್ಣ. ಮಹಾಲಯಗಳಲ್ಲಿ ಅಥವಾ ಶ್ರಾದ್ಧಗಳಲ್ಲಿ ನಮ್ಮನ್ನಗಲಿದ ಹಿರಿಯರಿಗೆ ಪಿಂಡ ಪ್ರದಾನ ಮಾಡುತ್ತಿದ್ದೆವು. (ಬದರೀನಾಥ ಕ್ಷೇತ್ರದಲ್ಲಿ ಇದೇ ರೀತಿ ಬಂಧು ಬಾಂಧವರಿಗೆ ಪಿಂಡ ಪ್ರದಾನ ಮಾಡಿದ ನೆನಪು) ಆದರೆ ಬಂಧು ಮಿತ್ರರಿಗೆ ಜಲತರ್ಪಣವನ್ನೀಯುವ (ದೇವ ತರ್ಪಣ, ಋಷಿ ತರ್ಪಣ ,ಪಿತೃ ತರ್ಪಣ ) ಕಾರ್ಯ ಬಹು ಶ್ರದ್ಧೆಯ ಕಾರ್ಯ ಅನ್ನಿಸಿತು.
ಋಷಿ ಪೂಜೆಯೊಂದಿಗೆ, ಅಧ್ಯಯನದ ಆರಂಭದ ಸೂಚಕವಾಗಿ ವೇದದ ಮಂತ್ರಗಳನ್ನು ಸಾಂಕೇತಿಕವಾಗಿ ಆಚಾರ್ಯ ಮುಖೇನ ಅಧ್ಯಯನ ಮಾಡಿಸಿ ಋಷಿ ಪೂಜಾ ತೀರ್ಥ ಪ್ರೋಕ್ಷಣೆಯೊಂದಿಗೆ ಈ ಕಾರ್ಯಕ್ರಮ ಸಂಪನ್ನವಾಯಿತು.
ಇಂಥಾ ಕಾರ್ಯಕ್ರಮದಲ್ಲಿ ಎಲ್ಲಾ ಬಾಂಧವರೂ ಪಾಲ್ಗೊಂಡರೆ ನಮ್ಮ ಸನಾತನ ಧರ್ಮದ ಬೆಳವಣಿಗೆ ಶೀಘ್ರವಾಗಿ ಮುಂದಿನ ಜನಾಂಗಕ್ಕೂ ಈ ಸಂಪ್ರದಾಯ ಮುಂದುವರಿಯಲಿ ಎಂಬ ಆಶಯದೊಂದಿಗೆ...
Comments