ಈ ಬಾರಿಯ ಬೆಂಗಳೂರು ಕರಾಡ ಸಮಾಜದ ಗುರುದರ್ಶನ ಕಾರ್ಯಕ್ರಮವು ೩ ದಿನದ ಯಾತ್ರೆಯೊಂದಿಗೆ ಹಲವು ಹೊಸ ಸ್ಥಳಗಳ ಪ್ರವಾಸದೊಂದಿಗೆ ಬಹಳ ವಿಶೇಷವಾಗಿ, ಅಚ್ಚುಕಟ್ಟಾಗಿ ನಡೆಯಿತು.
೨೭-ಜೂಲೈ ೨೦೨೪ರ ಬೆಳಿಗ್ಗೆ ೭ ಗಂಟೆಗೆ ಆರಂಭವಾದ ನಮ್ಮ ಪಯಣದ ಮೊದಲ ನಿಲ್ದಾಣ - ಹಿರೇಮಗಳೂರು ಕೋದಂಡ ರಾಮ ದೇವಸ್ಥಾನ.
ಸುಮಾರು ೧೭೦೦ ವರುಷ ಹಳೆಯ ಚೋಳರ ಕಾಲದಲ್ಲಿ ನಿರ್ಮಾಣವಾಗಿ ಹೊಯ್ಸಳರಿಂದ ಮುಖ ಮಂಟಪ ಕಟ್ಟಲ್ಪಟ್ಟು ವಿಜಯನಗರ ಅರಸರುಗಳಿಂದ ಪ್ರಾಕಾರ, ಗೋಪುರಗಳು ನಿರ್ಮಿತವಾದ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಾನ
ಇತಿಹಾಸದ ಅಧ್ಯಯನಕ್ಕೆ ಹಲವು ಪರಿಕರಗಳು ಇರುವುದರ ಜೊತೆಗೆ ಧಾರ್ಮಿಕ ಚಿಂತನೆ ಈಡುಮಾಡುವ ಈ ತಾಣ ಹಲವು ವಿಷಯಗಳಿಗೆ ವಿಶೇಷ.
ನಮ್ಮೆಲ್ಲರ ಸ್ಪೂರ್ತಿಯ ಸೆಲೆ ವಿವೇಕಾನಂದರಿಗೆ ಚಿಕಾಗೋ ಪಯಣಕ್ಕೆ ಸಹಕರಿಸಿದ ಅಳಸಿಂಗ ಪೆರುಮಾಳ ವಂಶಸ್ತ ಶ್ರೀ ಹಿರೇಮಗಳೂರು ಕಣ್ಣನ್ (ಕನ್ನಡದ ಪೂಜಾರಿ - ಹರಟೆಯ ಕಣ್ಣನ್ ಮಾಮ) ಅವರ ಕನ್ನಡಮಂತ್ರದ ಪೂಜೆಗೊಳಲ್ಪಡುವ ಕೋದಂಡ ರಾಮನ ವಿಗ್ರಹವೇ ವಿಶೇಷ.
ವಾಮ (ಎಡ) ಭಾಗದಲ್ಲಿ ಇರಬೇಕಾಗಿದ್ದ ಸೀತಾ ದೇವಿ ಇಲ್ಲಿ ಬಲಭಾಗಕ್ಕೆ ಲಕ್ಷ್ಮಣ ಎಡಭಾಗಕ್ಕೆ.
ಕಾರಣ: ಶಿವ ಧನುಸ್ಸನ್ನು ಮುರಿದು, ಸೀತಾ ಕಲ್ಯಾಣವಾಗಿ ಅಯೋಧ್ಯೆಯ ಕಡೆ ಹೊರಟಿದ್ದ ಶ್ರೀರಾಮನ ಜೊತೆ ಯುದ್ಧಕ್ಕಾಗಿ ಪರಶುರಾಮನು ಬಂದು ಶ್ರೀ ರಾಮನ ಜೊತೆ ಯುದ್ಧಕ್ಕೆ ನಿಂತು, ಯುವ ರಾಮನಿಂದ ಸೋಲಲ್ಪಟ್ಟವನಾಗಿ ರಾಮನು ತನ್ನಂತೆಯೇ ಮಹಾವಿಷ್ಣುವಿನ ಅವತಾರವೆಂದು ತಿಳಿದು, ಮುಂದೆ ಕ್ಷತ್ರಿಯರಿಂದ ಧರ್ಮಕ್ಕೆ ಅಪಾಯವಿಲ್ಲ ಎಂಬುದನ್ನು ಧೃಡ ಪಡಿಸಿ ಹೊರಡುವ ಮುನ್ನ ಶ್ರೀ ರಾಮನ ಕಲ್ಯಾಣ ಮುಹೂರ್ತವನ್ನು ಕಾಣುವ ಆಸೆಯನ್ನು ವ್ಯಕ್ತ ಪಡಿಸಿದಾಗ ತೋರಿಸಿದ ಸೀತಾ ಕಲ್ಯಾಣ ಮೂರ್ತಿಯೇ ಇಲ್ಲಿರುವ ಕಲ್ಯಾಣ ರಾಮನ ವಿಗ್ರಹ.
ಇಲ್ಲಿನ ವಿಗ್ರಹಗಳು ವಿಶೇಷವಾದ ನಾಟ್ಯಶಾಸ್ತ್ರದ ತ್ರಿಭಂಗಿ ಯಲ್ಲಿದ್ದು ವಿಶೇಷ ಗಮನ ಸೆಳೆಯುತ್ತಿದೆ.
ಇಲ್ಲಿ ಸಂಸ್ಕೃತ ವಿದ್ವಾನ್ ಡಾ. ವೈಷ್ಣವ ಸಿಂಹ ಇವರಿಂದ ದೇವಾಲಯದ ಇತಿಹಾಸ, - ಮೂರ್ತಿಯ ವಿಶೇಷತೆಗಳನ್ನು ತಿಳಿದುಕೊಂಡು, 'ಶ್ರೀ ರಾಮ' ಜಪ ಲೇಖಾ ಯಜ್ಞಕ್ಕಾಗಿ ೧೦೮ ರಾಮಜಪವನ್ನು ಬರೆದು ಅರ್ಪಿಸಿ ಹೊರಬಂದೆವು. ಸುತ್ತಲಿನ ದೇವಾಲಯದ ಶಿಲ್ಪಗಳನ್ನು ನೋಡುತ್ತಾ ಅದರ ಸೌಂದರ್ಯ ಆಸ್ವಾದಿಸುತ್ತಿರುವಾಗಲೇ ಸಮಯ ಓಡುತ್ತಿತ್ತು
ಹಾಗೆ ಕಣ್ಣನ್ ಮಾಮನಿಗಾಗಿ ಹುಡುಕುತ್ತ ಪಕ್ಕದಲ್ಲೇ ನಡೆಯುತ್ತಿರುವ ಹೆಬ್ಬಾರ ವೈಷ್ಣವ ಸಂಘದ ಸಭಾ ಕಾರ್ಯಕ್ರಮದತ್ತ ಕಣ್ಣು ಹಾಯಿಸಿದಾಗ ಆತ್ಮೀಯವಾಗಿ ಕರೆದು ಮಾತನಾಡಿಸಿ ಅತಿಥಿ ಸತ್ಕಾರಗಳನ್ನು ಮಾಡಿ ಕಳಿಸಿದವರು ಶ್ರೀ ಸತ್ಯನಾರಾಯಣ ಪ್ರಸಾದ ಎಂಬವರು.
ಅಲ್ಲಿ ಮಧ್ಯಾಹ್ನದ ಸುಗ್ರಾಸ ಭೋಜನವನ್ನು ಮುಗಿಸಿ ಸುಮಾರು ೨ ಗಂಟೆಗೆ ಅಲ್ಲಿಂದ ಹೊರಟು ಹರಿಹರಪುರದತ್ತ ನಮ್ಮ ಪಯಣ ಸಾಗಿತು.
ಮಾರ್ಗ ಮಧ್ಯದಲ್ಲಿ ಅಚಾನಕ್ ಆಗಿ ಕಣ್ಣಿಗೆ ಬಿತ್ತು ಬೆಟ್ಟದ ಮೇಲೊಂದು ಸಣ್ಣ ದೇವಾಲಯ.
ವರ್ತೇಕಲ್ ಮಹಾಗಣಪತಿ ದೇವಾಲಯ.
ಸುಂದರವಾದ ಪರಿಸರ. ನೂರು ಮೀಟರ್ ಮುಂದೆ ಹೋಗಿದ್ದ ಕಾರನ್ನು ನಿಲ್ಲಿಸಿ ಹಿಂದೆ ಬಂದು ೫೦ -೬೦ ಮೆಟ್ಟಿಲೇರಿ ಮೇಲಿದ್ದ ಸುಂದರ ಪರಿಸರದ ಮಧ್ಯೆ ವಿರಾಜಮಾನವಗ್ಗಿದ್ದ ಉದ್ಭವ ಗಣೇಶನನ್ನು ನೋಡಿ ಬೆಟ್ಟದಿಂದ ಹರಿದುಬರುತ್ತಿದ್ದ ನೀರನ್ನು ಕುಡಿದು ಕೆಳಕ್ಕೆ ಬಂದಾಗ ಆಹ್ಲಾದಗೊಂಡ ಮನಸ್ಸು.
ಹಾಗೆ ಸುಮಾರು ೫ ಗಂಟೆಯ ವೇಳೆಗೆ ಹರಿಹರಪುರಕ್ಕೆ ಸೇರಿದೆವು. ಬಂದೊಡನೆ ನಮ್ಮನ್ನು ಸೆಳೆದದ್ದು ವಿಶಾಲವಾದ ಗೋಪುರ, ಸುಮಾರು ೩೦ ಅಡಿ ಎತ್ತರದ ಸುಂದರ ಆಂಜನೇಯನ ಮೂರ್ತಿ.
ಹಾಗೆ ಕಾರು ನಿಲ್ಲಿಸಿ ಯಾತ್ರಿಕರ ಅತಿಥಿ ಗೃಹ ದತ್ತ ಸಾಗಿದಾಗ ಸುಂದರ ಸ್ವಚ್ಛ-ವಿಶಾಲ ಲಾಬಿ, ೩ ಡಬಲ್ ರೂಮ್ ಪಡೆದು ನಮ್ಮ ಸರಂಜಾಮುಗಳನ್ನು (ಲಗ್ಗೇಜ್ ) ಹೊತ್ತುಕೊಂಡು ರೂಮು ಸೇರಿದೆವು. ಸ್ವಚ್ಛ ಅನುಕೂಲಕರ ರೂಮು. ಫ್ರೆಶ್-ಅಪ್ ಆಗಿ ಪಕ್ಕದಲ್ಲೇ ಇದ್ದ ಶ್ರೀ ಮಠದ ಕ್ಯಾಂಟೀನ್ ನಲ್ಲಿ ಕಾಫಿ ಕುಡಿದು ಸುಮಾರು ೬-೩೦ಕ್ಕೆ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀ ನೃಸಿಂಹ ಪೀಠಕ್ಕೆ ಬಂದು ಸೇರಿದೆವು.
ವಿಶಾಲವಾದ ಸುಂದರ ಪರಿಸರದಲ್ಲಿ ಸುಸಜ್ಜಿತವಾಗಿ ಸಕಲ ಅನುಕೂಲತೆಗಳೊಂದಿಗೆ ನಿರ್ಮಿಸಲ್ಪಟ್ಟ ಶ್ರೀ ಮಠದ ವಾತಾವರಣವೇ ಆನಂದದಾಯಕ. ತುಂಬಿ ಹರಿಯುವ ತುಂಗಾ ನದಿಯ ಸುಂದರ ತಟದಲ್ಲಿ ಶ್ರೀ ಅಗಸ್ಥ್ಯ ಮಹರ್ಷಿಗಳಿಂದ ಸ್ಥಾಪಿಸಲ್ಪಟ್ಟ ಆದಿ ಗುರು ಶ್ರೀ ಶಂಕರರಿಂದ ಪೂಜೆಗೊಳಲ್ಪಟ್ಟ ವಜ್ರ ಕಂಬ ಶ್ರೀ ಲಕ್ಷ್ಮೀ ನೃಸಿಂಹ ದೇವರ ಸುಂದರ ವಿಗ್ರಹ, ಪಕ್ಕದಲ್ಲೇ ಶ್ರೀ ಶಾರದಾ ದೇವಿ ಹಾಗೂ ಶ್ರೀ ಶಂಕರರ ವಿಗ್ರಹಗಳು. ಅರ್ಚನೆಯ ಸಂಕಲ್ಪ ಮಾಡಿಸಿ, ೮ ಗಂಟೆಗೆ ಸರಿಯಾಗಿ ಶ್ರೀ ದೇವರ ಪೂಜೆಯ ಪೂಜೆಯ ಬಳಿಕ ಶ್ರೀಮಠದ ಪ್ರಸಾದ ಭೋಜನ ಸೇವಿಸಿ ಮೊದಲ ದಿನದ ಪ್ರವಾಸವನ್ನು ಸಂಪನ್ನಗೊಳಿಸಿದೆವು
-----------*****-------------
೨ನೇ ಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಪೂರೈಸಿ ಶ್ರೀಮಠದಲ್ಲಿದ್ದ ಗಣೇಶ ಪ್ರಪಂಚವನ್ನು ವೀಕ್ಷಿಸ ಹೊರಟೆವು. ದೇಶ ವಿದೇಶಗಳಿಂದ ಸಂಗ್ರಹಿಸಿದ ಸುಮಾರು ೨೦೦೦ಕ್ಕೂ ಹೆಚ್ಚಿನ ಗಣೇಶನ ವಿವಿಧ ಭಂಗಿಗಳ ವಿವಿಧ ಸ್ವರೂಪದ ಮೂರ್ತಿಗಳ ವಿಸೃತ ದರ್ಶನ ಮಾಡಿ ಉಪಹಾರ ಮುಗಿಸಿ ಹತ್ತಿರದ ಸ್ಥಳಗಳ ವೀಕ್ಷಣೆ ಮಾಡುವುದೆಂದು ನಿರ್ಧರಿಸಿದೆವು.
ನಮ್ಮ ಮೊದಲ ನಿರ್ಧಾರದಂತೆ ಹೊರನಾಡು, ಕಳಸ ಹಾಗೂ ಶಕಟಾಪುರಮ್ (ಬಂಡಿಗದ್ದೆ)ಗೆ ಹೋಗುವುದೇ ಅಥವಾ ಬೇರೆಲ್ಲಾದರೂ ಹತ್ತಿರದ ಜಾಗಕ್ಕೆ ಹೋಗುವುದೇ ಎಂದು ಚಿಂತಿಸಿ, ಮಳೆ ಸ್ವಲ್ಪ ಹೆಚ್ಚೇ ಇದ್ದುದರಿಂದ ಬೆಳಿಗ್ಗೆ ಕು.ವೆಂ.ಪು. ಅವರ ಹುಟ್ಟೂರಾದ ಕುಪ್ಪಳ್ಳಿಗೆ ಹೋಗಿ ಕವಿ ಶೈಲ ನೋಡಿ, ಶಕಟಾಪುರಕ್ಕೆ ಹೋಗಿ ಸಾಧ್ಯವಾದರೆ ರಾತ್ರಿಗೆ ಹೊರನಾಡು ಹೋಗೋಣ ಎಂಬ ಪ್ಲಾನ್ ಮಾಡಿ ಕವಿಶೈಲದತ್ತ ನಮ್ಮ ಪ್ರಯಾಣ ಬೆಳೆಸಿದೆವು.
ಸುಮಾರು ೯:೩೦ಕ್ಕೆ ಹೊರಟ ನಾವು ೧೦-೧೫ರ ಸುಮಾರಿಗೆ ಕವಿ ಶೈಲವನ್ನು ತಲುಪಿದೆವು.
ನೋಡಲು ನಮ್ಮೂರಿನ ಗುಡ್ಡೆಯಂತಿದ್ದರೂ, ವಿಶಾಲವಾದ ಬಂಡೆಯ ಮೇಲೆ ಹಲವು ಬಂಡೆಗಳನ್ನಿಟ್ಟು ಪ್ರವಾಸಿಗರ ಕಲ್ಪನೆಯೂ ಜಾಗ್ರತಗೊಳ್ಳುವಂತೆ ಮಾಡುವ ವಿವಿಧ ಆಕೃತಿಗಳನ್ನು ಬಂಡೆಯಲ್ಲಿ ನಿರ್ಮಿಸಿ, ಕುವೆಂಪುರವರ ಉಧೃತ ವಾಕ್ಯ/ಸಂದೇಶಗಳನ್ನು ಸಾರುವ ಫಲಕಗಳನ್ನು ಜೋಡಿಸಿಟ್ಟಿದ್ದರು.
ಸುತ್ತಲೂ ಗುಡ್ಡಗಳಿಂದ ಆವೃತವಾದ ಅಲ್ಲಿನ ಪರಿಸರ ಕವಿರಿಷಿಗೆ ಎಷ್ಟು ಪ್ರಿಯವಾಗಿರಬಹುದೆನ್ನುವ ಅರಿವು ನಮಗೆ ಮೂಡಿಸುತಿತ್ತು.
ಕವಿಶೈಲ ನೋಡುತ್ತಿರುವಾಗ ಅಲ್ಲಿಗೆ ಬಂದ ಟ್ರಸ್ಟಿಗಳಲ್ಲೊಬ್ಬರಾದ ಪ್ರೊಫೆಸರ್ ... ನಮಗೆ ಜೊತೆಯಾಗಿ ಅಲ್ಲಿನ ಬಗ್ಗೆ ನಮಗೆ ವಿವರ ನೀಡುತ್ತಿದ್ದರು.
ನಮ್ಮ ಜೊತೆಗಿದ್ದ ಚಿಂತಕ-ಸಹೃದಯಿ-ಸಂಪನ್ಮೂಲ ವ್ಯಕ್ತಿತ್ವದ ವೆಂಕಟೇಶಣ್ಣ ಅವರ ಜೊತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸುತ್ತಿರುವಾಗ, ನಾವು ಮೌನವಾಗಿ ಕೇಳುತ್ತ, ನಮ್ಮ ನೆನಪಿನ ಕೋಶಗಳನ್ನು ಸ್ಪರ್ಶಿಸುತ್ತಾ, ಜ್ಞಾನದ ಕೋಶಕ್ಕೆ ಒಂದಷ್ಟು ವಿಷಯ ಸೇರಿಸುತ್ತ, ಕವಿಶೈಲದಿಂದ ಕೆಳಗಿಳಿದು ಕುವೆಂಪುರವರ ಮನೆಯ ಕಡೆ ಸಾಗಿದೆವು.
ಅವರು ತಿಳಿಸಿದಂತೆ ಈ ಸ್ಥಳವನ್ನು ವೀಕ್ಷಿಸುವ ಪ್ರವಾಸಿಗರ/ಸಾಹಿತ್ಯಪ್ರಿಯರ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ. ಕಳೆದ ಏಪ್ರಿಲ್ ನಿಂದ ಈ ವರೆಗೆ ಸುಮಾರು ೨ ಲಕ್ಷಕ್ಕೂ ಮಿಕ್ಕಿ ಜನರು ಈ ಜಾಗವನ್ನು ವೀಕ್ಷಿಸಿದರಂತೆ.
ಒಂದಷ್ಟು ಮಳೆಯಲ್ಲಿ ಒದ್ದೆಯಾಗುತ್ತಾ ರಾಷ್ಟ್ರಕವಿಗಳ ಮನೆಯ ಒಂದೊಂದು ಕೋಣೆಯನ್ನೂ ನೋಡುತ್ತಾ ಅವರ ಕುಟುಂಬದ ಪರಿಚಯ, ಮನೆಯ ಪರಿಕರ, ಅವರು ಉಪಯೋಗಿಸುತ್ತಿದ್ದ ಸಲಕರಣೆಗಳು ಎಲ್ಲವನ್ನೂ ಒಪ್ಪವಾಗಿ ಜೋಡಿಸಲಾಗಿತ್ತು.
ಇದನ್ನೆಲ್ಲಾ ನೋಡುತ್ತಿದ್ದಾಗ ಹಿಂದೆ ನೋಡಿದ್ದ ವಿವೇಕಾನಂದ , ರಾಮಕೃಷ್ಣ ಪರಮ ಹಂಸ , ಶಾರದಾ ದೇವಿಯರ ಮನೆಯನ್ನು ವೀಕ್ಷಿಸಿದ ನೆನಪು ಬಂತು.
ಕುವೆಂಪುರವರು ಬರೆದಿದ್ದ ಕೆಲವಷ್ಟೇ ಪುಸ್ತಕಗಳ ಪರಿಚಯವಿದ್ದ ನನಗೆ, ಅವರು ಬರೆದಿದ್ದ ಸಾಹಿತ್ಯದ ಭಂಡಾರವನ್ನು ನೋಡಿ ಮೌನಕ್ಕೆ ಶರಣಾಗುವುದೇ ಸೂಕ್ತವೆನಿಸಿತು.
ಅಂತೂ ಏನೋ ಒಂದು ಶ್ರೇಷ್ಠವಾದ - ಪವಿತ್ರವಾದ ಜಾಗಕ್ಕೆ ಭೇಟಿ ನೀಡಿದ ಧನ್ಯತಾ ಭಾವ.
ಪಕ್ಕದಲ್ಲೇ ಇದ್ದ ಪೂ ಚಂ ತೇ (ಪೂರ್ಣ ಚಂದ್ರ ತೇಜಸ್ವಿಯವರ ) ಸಮಾಧಿ ಹಾಗೂ ಸಂಗ್ರಹಾಲಯ ವೀಕ್ಷಿಸಿ, 'ಹೇಮಾಂಗಣ' ಎಂಬ ಕುವೆಂಪು ಪತ್ನಿ ಹೆಸರಿನ ಸಭಾ ಮಂಟಪ ನೋಡಿ ಹರಿಹರಪುರಕ್ಕೆ ಬಂದಾಗ ೨ ಘಂಟೆ. ಶ್ರೀಮಠದಲ್ಲಿ ಪ್ರಸಾದ ಭೋಜನ ಸೇವಿಸಿ ರೂಮನ್ನು ಸೇರಿದೆವು.
ಈ ತನಕ ಜೊತೆಯಾಗಿದ್ದ ಅವಳ ಮಠ ಲಕ್ಷ್ಮೀನಾರಾಯಣಣ್ಣ ಹಾಗೂ ಅವರ ಶ್ರೀಮತಿಯವರು ಶೃಂಗೇರಿಗೆ ಹೋಗಿ ಆ ದಿನವನ್ನು ಶೃಂಗೇರಿಯಲ್ಲಿ ಕಳೆಯುವೆವೆಂದು ಹೊರಟರು.
ಬೆಳಿಗ್ಗೆ ಸಂದರ್ಶಿಸಬೇಕೆಂದಿದ್ದ ಶಂಕರಾಚಾರ್ಯ ಸ್ಥಾಪಿತ ಬದರಿಕಾಶ್ರಮದ ಶಾಖಾ ಮಠವಾದ ಶಕಟಾಪುರಮ್ ಸಂತಾನ ವೇಣುಗೋಪಾಲಸ್ವಾಮಿಯ ದರ್ಶನ ಮಾಡುವ ನಿರ್ಧಾರ ಮಾಡಿದೆವು. ಆದರೆ ಸಂದರ್ಶನದ ವೇಳೆ ೫:೩೦, ಸುಮಾರು ೪-೩೦ರ ನಂತರ ಹೊರಡುವ, ಅಲ್ಲಿಯ ವರೆಗೆ ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ರೂಮಿಗೆ ಬಂದು ೪ ಘಂಟೆಗೆ ಅಲಾರಾಂ ಇಟ್ಟು ಮಲಗಿದ್ದ ನನಗೆ ಗಾಢ ನಿದ್ರೆ. ಅದೇನೋ ೩:೩೦ಕ್ಕೆ ಮೇಘದೂತನೊ ಅಥವಾ ಪಾರ್ಶ್ವನಾಥ ಸ್ವಾಮಿಯೊ ಇಲ್ಲಾ ಪ್ರಕೃತಿ ಮಾತೆಯೋ ಬಂದು ಎಬ್ಬಿಸಿ ಕುಂದಾದ್ರಿ ಪರ್ವತಕ್ಕೆ ಹೊರಡು ಅಲ್ಲಿದ್ದ ಪಾರ್ಶ್ವನಾಥ ಬಸದಿಯನ್ನು ವೀಕ್ಷಿಸು ಎಂಬಂತಾಗಿ ಹೊರಡೋಣ ಎಂದು ಅಶೋಕಣ್ಣ, ವೆಂಕಟೇಶಣ್ಣ ಹಾಗೂ ಮುರಳಿಯನ್ನು ಹೊರಡಿಸಿದೆ.
ಸುಮಾರು ೨೫ ಕಿ ಮೀ. ದೂರದ ಕುಂದಾದ್ರಿಗೆ ಹೋಗೋಣ ಎಂದು ಕಾರಿನಲ್ಲೇ ಬೆಟ್ಟ ಏರ ತೊಡಗಿದೆವು. ಬೆಟ್ಟದ ತಿರುವುಗಳು ಹಾಗು ಏರು ದುಷ್ಕರವಾಗಿತ್ತು ಅಲ್ಲದೇ ದಾರಿಯೂ ಬಹಳ ಕೆಟ್ಟಿತ್ತು. ಸಮಯವೂ ಸಂಜೆಯಾಗುತ್ತಾ ಬಂದಿತ್ತು. ಬೆಟ್ಟದ ಬುಡದಲ್ಲಿದ್ದ ಗಾರ್ಡ್ ಇನ್ನು ೧೫ ನಿಮಿಷದಲ್ಲೇ ಬರಬೇಕೆಂದು ನಮ್ಮನ್ನು ಬೆಟ್ಟವೇರಲು ಕಳುಹಿಸಿದ. ನಾನು ಮೌನವಾಗಿ ಪ್ರಕೃತಿಯ ಸೌಂದರ್ಯ ಸವಿಯುತ್ತಾ ಸಾಗುತ್ತಿದ್ದೆ ಮೌನವಾಗಿ ಕಾರಿನಲ್ಲೇ ಕುಳಿತಿದ್ದೆ. ಮುರಳಿ ನಿಧಾನವಾಗಿ ಕಾರನ್ನು ಚಲಾಯಿಸುತ್ತಾ ಬೆಟ್ಟದ ನಮ್ಮನ್ನು ಬೆಟ್ಟದ ತುದಿಗೆ ಕರೆದೊಯ್ದರು.
ಕಾರು ನಿಲ್ಲಿಸಿದ ಜಾಗದಿಂದ ಮಳೆಯಲ್ಲಿ ಒದ್ದೆಯಾಗುತ್ತಾ ೩೦ ಮೆಟ್ಟಿಲುಗಳನ್ನೇರಿದರೆ ಆದ ಅನುಭವ ತಿಳಿಸಲು ಸಾಧ್ಯವೇ ಇಲ್ಲ.
ಮೇಘಾಲಯದಲ್ಲಿ ಮೇಘಗಳಿಗೆ ಮೈಯೊಡ್ಡಿದ ಅನುಭವ. ನಮ್ಮ ಕಣ್ಣೆತ್ತರದಲ್ಲೇ ಮೇಘಗಳು ಸಂಚರಿಸಿ ಮಳೆ ಸುರಿಸುವ ಸುಂದರ ದೃಶ್ಯ.
ಮಳೆಯನ್ನು ಬೇರೆಲ್ಲಿಗೋ ಕೊಂಡೊಯ್ಯಬೇಕೆಂದು ಜೋರಾಗಿ ಬೀಸುವ ಗಾಳಿ. ನೀರನ್ನು ಹೊತ್ತು ಸುಸ್ತಾಗಿ ಇಲ್ಲೇ ನೀರನ್ನು ಚೆಲ್ಲಿಬಿಟ್ಟು ದಣಿವಾರಿಸಿಕೊಳ್ಳಬೇಕೆಂಬ ಮೋಡ. ಇದನ್ನೆಲ್ಲಾ ನೋಡಲು ಮೊಡದೆಡೆಯಲ್ಲಿ ಇಣುಕಬಯಸುವ ಸೂರ್ಯ, ಸೂರ್ಯನನ್ನು ಸೇರಬಯಸುವ ಸಂಧ್ಯೆ.
ಪ್ರಕೃತಿಯ ಈ ಸೊಬಗನ್ನು ಹೇಳುವುದಾದರೂ ಹೇಗೆ? ಒಬ್ಬಂಟಿಯಾಗಿದ್ದರೆ ಮೌನವಾಗಿ ಕಣ್ಮುಚ್ಚಿ ಈ ಆನಂದವನ್ನು ಅನುಭವಿಸುತ್ತಿದ್ದೆ.
ಅಂತೂ ಮನಸ್ಸಿಲ್ಲದ ಮನಸ್ಸಿನಿಂದ ಸುಮಾರು ೬ ಘಂಟೆಗೆ ಕೆಳಗಿಳಿದದ್ದಾಯಿತು. ನೇರವಾಗಿ ಶಕಟಾಪುರಕ್ಕೆ ೪೫ ನಿಮಿಷಗಳ ಪಯಣ ಮಾಡಿ
೬:೪೫ಕ್ಕೆ ಶಕಟಾಪುರಮ್ ಶ್ರೀ ವಿದ್ಯಾಪೀಠಮ್ ತಲುಪಿದೆವು.
'ಶಕಟಾಪುರಮ್ ವಿದ್ಯಾಪೀಠ' ಬದರಿಕಾಶ್ರಮದ ಶಾಖಾ ಮಠವಾಗಿ ೧೩ನೇ ಶತಮಾನದಲ್ಲಿ ಬದರಿಯಿಂದ ಬಂದ ಗುರುಗಳು ತುಂಗಾ ತೀರದಲ್ಲಿ ನೆಲೆಸಿದ ಪುಣ್ಯ ಸ್ಥಳವಾಗಿದೆ. ಅವರು ತಂದ ಸಂತಾನ ವೇಣುಗೋಪಾಲ ಸ್ವಾಮಿಯ ವಿಗ್ರಹ ನಯನ ಮನೋಹರವಾಗಿ ಮನಸ್ಸನ್ನು ಆಕರ್ಷಿಸುವಂತಿತ್ತು. ಇದಲ್ಲದೇ ಅಲ್ಲಿ ಸ್ಥಾಪಿಸಿರುವ ಶ್ರೀ ರಾಜ ರಾಜೇಶ್ವರಿ ಹಾಗೂ ಲಕ್ಷ್ಮಿ ನೃಸಿಂಹ ವಿಗ್ರಹಗಳೂ ಆಕರ್ಷಕವಾಗಿ ಭಕ್ತರನ್ನು ಸೆಳೆಯುತ್ತಾ, ಬಲು ಸುಂದರವಾದ ಶ್ರೀ ಮಠದ ಆವರಣ ತುಂಬಾ ದೈವಿಕವಾಗಿ ಧ್ಯಾನ ಮಾಡಲು ತುಂಬಾ ಅನುಕೂಲಕರವಾಗಿತ್ತು.
ಹಾಗೆ ಒಂದು ಪ್ರದಕ್ಷಿಣೆ ಬಂದು ಸ್ವಲ್ಪ ಸಮಯ ಧ್ಯಾನ ಮಾಡಿ, ೭:೧೦ಕ್ಕೆ ಸರಿಯಾಗಿ ನಡೆದ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡೆವು.
ಅಲ್ಲಿಂದ ಅವಸರ ಅವಸರವಾಗಿ ಹೊರಟು ೮ ಘಂಟೆಯ ಪೂಜಾ ಸಮಯಕ್ಕೆ ಸರಿಯಾಗಿ ಹರಿಹರಪುರದ ಮಠ ತಲುಪಿದೆವು. ಅಲ್ಲಿ ಪೂಜೆ , ಭೋಜನ ಪ್ರಸಾದ ಸ್ವೀಕರಿಸಿ, ದಿನದ ಘನವಾದ ಅನುಭವವನ್ನು ಹೊತ್ತ ಭಾವದಲ್ಲಿ ಹಾಗೇ ಮುಳುಗಿ ನಿದ್ರಿಸಿದೆವು.
-----------*****-------------
೨೯ನೇ ತಾರೀಕು ಸೋಮವಾರ ಗುರುದರ್ಶನಕ್ಕಾಗಿ ಶೃಂಗೇರಿಗೆ ನಮ್ಮ ಪಯಣ. ಬೆಳಿಗ್ಗೆ ೫ ಗಂಟೆಗೆ ಎದ್ದು ಸುಮಾರು ೬:೩೦ಕ್ಕೆ ಹೊರಟು ಶೃಂಗೇರಿಯಿಂದ ಸುಮಾರು ೧೨ ಕಿ.ಮೀ ದೂರದಲ್ಲಿರುವ ಶಾಂತಾ ಸಹಿತ, ಶ್ರೀ ರಿಶ್ಯ ಶೃಂಗೇಶ್ವರ ದೇವಸ್ಥಾನ ವನ್ನು ಸಂದರ್ಶಿಸಲು ನಿರ್ಧರಿಸಿ ೭:೧೫ರ ಸುಮಾರಿಗೆ ದೇವಾಲಯವನ್ನು ತಲುಪಿದೆವು.
ಈ ದೇವಾಲಯಕ್ಕೆ ಹೋದಾಗಲೆಲ್ಲಾ ಹಿಂದೆಂದೋ ನೋಡಿದ ಚಲನಚಿತ್ರ 'ವೈಶಾಲಿ' (ಮಲಯಾಳಂ) ಯ ಪಾತ್ರಗಳು, ಕಥೆ ಕಣ್ಣ ಮುಂದೆ ಬರುತ್ತದೆ.
"ಮಹರ್ಷಿ ವಿಭಾಂಡಕರಿಗೆ ಅಪ್ಸರೆಯ ದೆಸೆಯಿಂದ ಜಿಂಕೆಯ ಗರ್ಭದಲ್ಲಿ ತುಂಗಾ ತೀರದಲ್ಲಿ ಜನಿಸಿದ ಮಗುವೇ ರಿಷ್ಯಶೃಂಗ.
ತನಗಾದ ತಪೋ ಭಂಗ ಮಗನಿಗೆ ಆಗದಿರಲೆಂದು ಕಟ್ಟುನಿಟ್ಟಾಗಿ ಯಾವ ಸ್ತ್ರೀಯ ದರ್ಶನವೂ ಆಗದಂತೆ ಬೆಳೆಸಿದ ಮಗ ರಿಷ್ಯಶೃಂಗರನ್ನು ರಾಜ ರೋಮಪಾದನು ತನ್ನ ರಾಜ್ಯದಲ್ಲಿರುವ ಕ್ಷಾಮ ನಿವಾರಣೆಗಾಗಿ ರಾಜ್ಯಕ್ಕೆ ಕರೆಸಿ ಮಳೆ ತರಿಸಿ ಕ್ಷಾಮ ನಿವಾರಣೆ ಮಾಡಿದುದರಿಂದ ತನ್ನ ದತ್ತು ಮಗಳಾದ (ರಾಜಾ ದಶರಥನ ಮಗಳು ) ಶಾಂತಾಳನ್ನು ಕೊಟ್ಟು ಮದುವೆ ಮಾಡಿಸಿದ ಕಥೆ"
ಹಾಗೆ ದರ್ಶನ ಮುಗಿಸಿ,ಅಲ್ಲಿಯೇ ಮೈಸೊರಿಂದ ಬಂದ ಕರಾಡ ಬಂಧುಗಳ ಜೊತೆ ಸೇರಿ ದೇವಳದ ಎದುರಿರುವ ಮುದ್ದಾದ ದನ ಕರುಗಳಿಗೆ ಹಿಂಡಿ ಕೊಟ್ಟು, ಚಹಾ ಕುಡಿದು ೪ ಕಿ.ಮೀ. ದೂರದಲ್ಲಿ ಇರುವ 'ಸಿರಿಮನೆ' ಜಲಪಾತ ನೋಡಲು ಹೊರಟೆವು.
೮:೩೦ಕ್ಕೆ ಜಲಪಾತಕ್ಕಿಳಿಯುವ ಗೇಟ್ ತೆರೆದ ಬಳಿಕ ೫೦-೬೦ ಮೆಟ್ಟಲುಗಳನ್ನಿಳಿದು ಜಲಪಾತದ ಬುಡ ತಲುಪಿದೆವು.
ಭೋರ್ಗರೆದು ಬಂಡೆಗಳ ಮೇಲಿಂದ ಧುಮುಕಿ ಕೆಳಗೆ ನೆಲದ ಬಂಡೆಗಪ್ಪಳಿಸುವ ಜಲರಾಶಿಯನ್ನು ನೋಡಿ ಆನಂದಿಸದ ಮನಸ್ಸು ಇರಲು ಸಾಧ್ಯವೇ? ಎಷ್ಟೇ ಜಲಪಾತಗಳನ್ನು ಕಂಡರೂ ಪ್ರತಿಕ್ಷಣವೂ ಹೊಸದಾಗಿ ಬೀಳುವ ನೀರಿನ ಧಾರೆ. ಕೆಳಗೆ ಬಂಡೆಗಳ ಮೇಲೆ ಬಿದ್ದು ಅದು ಸಿಂಪಡಿಸಿ ನಮ್ಮನ್ನು ಒದ್ದೆಯಾಗಿಸುವ ನೀರ ಹನಿಗಳು, ವೇಗವಾಗಿ ಬೀಳುವ ನೀರು ಬಂಡೆಯ ಜೊತೆ ಸೇರುವಾಗಿನ ಘರ್ಷಣೆಯಿಂದಾಗುವ ಶಬ್ದ ಹಾಗೂ ಚೈತನ್ಯದ ಬಿಸಿ, ಒಮ್ಮೆಯಾದರೂ ನಮ್ಮನ್ನು ನಾವು ಮರೆಯುವಂತೆ ಮಾಡದಿದ್ದೀತೇ ?
ಅಂತೂ ಒಂದರ್ಧ ಗಂಟೆ ಅಲ್ಲಿ ಸಮಯ ಕಳೆದು ಶೃಂಗೇರಿ ದೇವಾಲಯದತ್ತ ಹೊರಟೆವು.
ತಿಂಡಿ ಮುಗಿಸಿ, ಶಾರದಾಂಬ ದೇವಿಯ ದರ್ಶನ ಗೈದು , ತೋರಣ ಗಣಪತಿ, ವಿದ್ಯಾಶಂಕರ ದೇವಾಲಯಗಳಿಗೆ ಹೋಗಿ, ಸುಮಾರು ೧೧:೦೦ ಘಂಟೆಗೆ ಗುರುದರ್ಶನಕ್ಕಾಗಿ ನರಸಿಂಹವನವನ್ನು ಸೇರಿದೆವು.
ಹಾಗೆ ಅಲ್ಲಿಗೆ ಊರು (ಬಾಯಾರು, ಪಡ್ರೆ ) ಮಂಗಳೂರು, ಗುಂಡ್ಯಡ್ಕ ಮುಂತಾದ ಜಾಗಗಳಿಂದ ಬಂದ ನಮ್ಮ ಬಂಧುವರ್ಗದೊಂದಿಗೆ ಸೇರಿ, ಕುಶಲೋಪರಿ ಮಾತನಾಡಿ, ಗುರುಗಳ ದರ್ಶನಕ್ಕಾಗಿ ಕಾದೆವು.
೧೨ ಘಂಟೆಗೆ ಪರಮ ಪೂಜ್ಯ ವಿಧುಶೇಖರ ಭಾರತೀ ಸ್ವಾಮಿಗಳು ಬಂದು ಫಲಕಾಣಿಕೆ ಸ್ವೀಕರಿಸಿ ಫಲ ಮಂತ್ರಾಕ್ಷತೆ ನೀಡಿದ ಬಳಿಕ ಆಶೀರ್ವಚನ ನೀಡಿದರು.
ಸ್ವಧರ್ಮ ಪಾಲನೆಯ ಅಗತ್ಯತೆಯನ್ನು ವಿವರಿಸಿ ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ಸಂಸ್ಕೃತಿಯ ಪರಿಪಾಲನೆಯ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಬ್ರಾಹ್ಮಣ ಹೊಂದಿರಬೇಕೆಂದು ತಿಳಿಸಿ, ಕರಾಡ ಸಮಾಜ ಸಂಘಟಿತವಾಗಿ ಬಂದುದಕ್ಕೆ ಸಂತಸ ವ್ಯಕ್ತಪಡಿಸಿ ಸಮಾಜ ಇನ್ನಷ್ಟು ಬೆಳೆಯಲಿ ಎಂದು ಆಶೀರ್ವದಿಸಿದರು
ಬಳಿಕ ಪ್ರಸಾದ ಭೋಜನವನ್ನು ಮುಗಿಸಿ ೩:೩೦ ರ ಹೊತ್ತಿಗೆ ಶೃಂಗೇರಿಯಿಂದ ಹೊರಟು ೧೧:೩೦ಕ್ಕೆ ಬೆಂಗಳೂರು ಸೇರಿದಲ್ಲಿಗೆ ನಮ್ಮ ಗುರುದರ್ಶನಾ ಪ್ರಯಾಣ ಸಂಪನ್ನವಾಯಿತು.
ಬೆಂಗಳೂರಿನಿಂದ ಈ ಪ್ರಯಾಣಕ್ಕೆ ತೆರಳಿದ ತಂಡ:
ಅಶೋಕ ಮುಂಡಕಾನ, ವೆಂಕಟೇಶ ಭಟ್ ಆಟಿಕುಕ್ಕೆ, ಮುರಳಿಕೃಷ್ಣ ದೈತೋಟ ಹಾಗೂ ಅರವಿಂದ ಮುಂಡಕಾನ.
ಜೊತೆ ಸೇರಿದವರು: ಶ್ರೀಮತಿ ಮತ್ತು ಶ್ರೀ ಲಕ್ಷ್ಮೀನಾರಾಯಣ ಭಟ್ವ ಅವಳ ಮಠ
Comments