ದಕ್ಷಿಣ ಪ್ರಯಾಗ - ತಿರುಮಕೂಡಲು
--------------------------------------------
ಮೊನ್ನೆ ಫ್ರೆಂಡ್ ರವಿ ಫೋನ್ ಮಾಡಿ ಒಂದು ಸ್ಕೂಲ್ ಟ್ರಿಪ್ ಹೋಗೋಣವಾ ಅಂತ ಕೇಳಿದಾಗ,ಎವರ್ ರೆಡಿ ಅಂತ ಹೇಳಿದ ನಾನು ಮಂಜು ಕೂಡ ಬರ್ತಾರಲ್ವಾ ಅಂತ ಕೇಳಿದೆ. ಒಂದು ಸಲ ಬರ್ತೇನೆ ಅಂದ ಮಂಜು ಗೆ ಸ್ವಲ್ಪ ಕೆಲಸದ ಒತ್ತಡ ಇದೆ ಹಾಗಿ ಬರ್ಲಿಕ್ಕೆ ಆಗ್ತಾ ಇಲ್ಲಾ ಅಂದ್ರೂ, ಕೊನೆಗೆ ಸಂಜೆಯಾದಾಗ ಅವರೂ ಕೂಡ ಬರ್ತಾರೆ ಅಂತ ಒಪ್ಪಿಗೆ ಕೊಟ್ರು. ಉಡುಪರೂ ರೆಡಿ ಇದ್ರು .ಹಾಗಾಗಿ ನಮ್ಮ ೪ ಜನರ ಶಿಷ್ಟ ಚತುಷ್ಟಯರ (RRAM-Ravi, Ramesh, Arav, Manju ) ತಂಡ ರೆಡಿ ಆಯ್ತು. ಉಡುಪರು Etios ಟ್ಯಾಕ್ಸಿ ಬುಕ್ ಮಾಡಿದ್ರು. ರವಿ ಹೋಗೋ ಜಾಗಗಳ ಪ್ಲಾನ್ ಮಾಡಿದ್ರು.
ಬೆಳಿಗ್ಗೆ ೬:೩೦ಕ್ಕೆ ರವಿ ಮನೆಗೆ ಬಂದಾಗ, ನಾನು ಸ್ನಾನ, ಪೂಜೆ ಎಲ್ಲ ಮಾಡಿ ರೆಡಿ ಆಗಿ ಇದ್ದೆ. ರವಿ ಜೊತೆ ಆಟೋ ಹಿಡಕೊಂಡು ಜೆಪಿ ನಗರ ಮೆಟ್ರೋ ಸ್ಟೇಷನ್ ಹತ್ರ ಬಂದು ಸಂತೋಷ್ ಎಂಬವರ ಕಾರು ಬಂತು. ಉಡುಪ ಹಾಗೂ ಮಂಜು ಕಾದು ಏಳು ಘಂಟೆಯ ಹೊತ್ತಿಗೆ ಅಲ್ಲಿಂದ ಹೊರಟು ಮೈಸೂರ್ ರೋಡ್ "ಪಾಕ ಶಾಲಾ" ತಿಂಡಿ ತಿನ್ನುವುದೆಂದು ಮಾತಾಡಿಕೊಂಡು ಹೊರಟೆವು.ಅಲ್ಲಿ ಶಾಲೆ ಬಿಡುವಾಗಿನ ತರಹದ ರಶ್ ಇದ್ದುದರಿಂದ ಪಕ್ಕದಲ್ಲೇ ಇದ್ದ "ಶಿವಳ್ಳಿ" ಹೋಟೆಲ್ ಗೆ ಹೋಗಿ ಹೊಟ್ಟೆ ತುಂಬಾ ತಿಂಡಿ ಮುಗಿಸಿ, ತಿರುಮಕೂಡಲು ನರಸೀಪುರಕ್ಕೆ ಹೊರಟೆವು.
ಕಾವೇರಿ , ಕಪಿಲಾ (ಕಬಿನಿ) ಹಾಗೂ ಗುಪ್ತಗಾಮಿನಿ ಸ್ಪಟಿಕಾ ಸರೋವರ ಗಳ ತ್ರಿಮುಕ್ತ ಕೂಡುವಿಕೆಯ ತೀರ್ಥ ಸ್ಥಳವೇ ತಿರುಮಕೂಡಲು.
ಇಲ್ಲಿ ನೆಲೆಸಿರುವ ಗುಂಜಾ ಲಕ್ಷ್ಮೀ ನರಸಿಂಹನಿಂದಾಗಿ ನರಸೀಪುರ.
ವಿಜಯನಗರ ಹಾಗೂ ಮೈಸೂರು ಅರಸುಗಳಿಂದ ಪೋಷಿಸಲ್ಪಟ್ಟ ಈ ಕ್ಷೇತ್ರದ ಇತಿಹಾಸ ತುಂಬಾ ರೋಚಕವಾಗಿದೆ.
ಒಂದಾನೊಂದು ಕಾಲದಲ್ಲಿ ಇಲ್ಲಿ ನದೀ ದಂಡೆಯಲ್ಲಿ ಬಟ್ಟೆಯೊಗೆಯುತ್ತಿದ್ದ ಅಗಸನೊರ್ವನಿಗೆ (ಬೆಸ್ತನಿಗೆ ಅಂತ ಇನ್ನೊಂದು ವರ್ಷನ್) ಕನಸಿನಲ್ಲಿ ಕಂಡ ನರಸಿಂಹ ಸ್ವಾಮಿಯು ಹೊತ್ತದೊಳಗಿಂದ ತನ್ನನ್ನು ಬಿಡುಗಡೆಗೊಳಿಸಲು ಹೇಳಿದಾಗ, ಆ ಅಗಸನು ಕನಸಲ್ಲಿ ಕಂಡ ಜಾಗಕ್ಕೆ ಹೋಗಿ ಹುತ್ತವೊಂದನ್ನು ನೋಡಲಾಗಿ ಅದನ್ನು ಬಿಡಿಸಿದಾಗ ದೊರಕಿದ ವಿಗ್ರಹವೇ ಲಕ್ಷ್ಮೀ ನರಸಿಂಹ ಮೂರ್ತಿ.
ಮರುದಿನ ಕನಸಿನಲ್ಲಿ ಬಂಡ ನರಸಿಂಹ ಸ್ವಾಮಿಯು ತನಗೆ ದೇವಸ್ಥಾನ ಕಟ್ಟಿಸಿಕೊಡಲು ಕೇಳಿದಾಗ ಹಣವೆಲ್ಲಿಂದ ತರಲಿ ಎಂದು ಪ್ರಶ್ನಿಸಲಾಗಿ, ಆತನು ಬಟ್ಟೆಯೊಗೆಯುತ್ತಿದ್ದ ಕಲ್ಲಿನ ಕೆಳಗಿದ್ದ ಐಶ್ವರ್ಯ ವನ್ನು ಆತನಿಗೆ ತೋರಿಸಿದ ಸ್ವಾಮಿಯ ಆಜ್ಞೆಯಂತೆಯೇ ದೇವಸ್ಥಾನ ಕಟ್ಟಿಸಿದನು.
ಇದರಿಂದ ಸಂತೋಷಗೊಂಡ ನರಸಿಂಹನು ವರವೇನು ಬೇಕೆಂದು ಕೇಳಿದಾಗ ತನಗೆ ಕಾಶೀ ಕ್ಷೇತ್ರಕ್ಕೆ ಹೋಗಿ ಗಂಗೆಯಲ್ಲಿ ಮಿಂದು ಮುಕ್ತನಾಗಬೇಕೆಂದು ಕೇಳಿದನಂತೆ.
ನರಸಿಂಹ ಸ್ವಾಮಿಯಿ ಈ ಜಾಗವು ಕಾಶೀ ಕ್ಷೇತ್ರಕ್ಕಿಂತ ಗುಲಗುಂಜಿ ಗಾತ್ರದಷ್ಟುಹೆಚ್ಚು ಎಂದು ತಿಳಿಸಿದನು. ಹೇಗೆಂದರೆ ಅಲ್ಲಿ ಗಂಗೆ, ಯಮುನಾ ಸರಸ್ವತಿಯರು ಸಂಗಮವಾದರೆ ಇಲ್ಲಿ ಕಾವೇರಿ ಕಪಿಲಾ ಸ್ಪಟಿಕಾ ಸಂಗಮವಾಗುತ್ತಾರೆ.
ಕಾಶೀ ಕ್ಷೇತ್ರದಲ್ಲಿ ವಟವೃಕ್ಷವಿದ್ದರೆ, ಇಲ್ಲಿ ಬ್ರಹ್ಮ-ಅಶ್ವತ್ಥ ವೃಕ್ಷವಿದೆ. ಕಾಶಿಯಲ್ಲಿ ವಿಶ್ವನಾಥನಿದ್ದರೆ, ಇಲ್ಲಿ ಅಗಸ್ತೇಶ್ವರನಿದ್ದಾನೆ. ಕಾಶಿಯಲ್ಲಿ ಬಿಂದು ಮಾಧವನಿದ್ದರೆ ಇಲ್ಲಿ ಗುಂಜಾ ಲಕ್ಷ್ಮೀ ನರಸಿಂಹನಿದ್ದಾನೆ.
ಅಲ್ಲದೇ ಗಂಗೆಯು ತನ್ನಲ್ಲಿ ಮಿಂದ ಜನರ ಪಾಪವನ್ನು ಹೊಂದಿದ್ದು, ಅದನ್ನು ಕಳೆಯುವ ಸಲುವಾಗಿ ವರುಷಕ್ಕೊಮ್ಮೆ ಒಂದು ತಿಂಗಳು ಕಾವೇರಿ ಯಲ್ಲಿ ಮಿಂದು ತನ್ನ ಪಾಪ ಪಹರಿಸಿಕೊಳ್ಳುತ್ತಾಳೆ. ಕಾವೇರಿ ಅಷ್ಟೂ ಪವಿತ್ರಳು. ಹಾಗಿ ಈ ಕ್ಷೇತ್ರವೇ ಹೆಚ್ಚು ಪವಿತ್ರ. ಇಲ್ಲಿ ಸ್ನಾನ ಮಾಡಿದರೂ ಮುಕ್ತಿ ಶತಸ್ಸಿದ್ಧ ಎಂದು ತಿಳಿಸಿ ಅದರ ದ್ಯೋತಕವಾಗಿ ಬಲಗೈಯಲ್ಲಿ ಗುಲಗುಂಜಿಯನ್ನು ಹಿಡಿದಿರುತ್ತಾನೆ.
ಇಂತಹ ಪವಿತ್ರ ಕ್ಷೇತ್ರಕ್ಕೆ ಬಂದು ತೆಪ್ಪವೊಂದರಲ್ಲಿ ಸಂಗಮ ಸ್ಥಳಕ್ಕೆ ಹೋಗಿ ಅಲ್ಲಿದ್ದ ನಂದೀ ಕಂಬಕ್ಕೆ ನೀರು ಹಾಕಿ ನಾವೂ ನೀರನ್ನು ಪ್ರೋಕ್ಷಿಸಿಕೊಂಡು, ತೀರ್ಥವನ್ನು ಕೊಡಿದು ಮೇಲೆ ಬಂದು ಅಗಸ್ತ್ಯೇಶ್ವರ ದೇವಾಲಯದ ಪ್ರಾಕಾರದಲ್ಲಿ ಸುತ್ತು ಬಂದೆವು.
ಈ ನಂದೀ ಕಂಬ ಹಾಗೂ ಅಂಗಸ್ಥೆಶ್ವರ ದೇವಸ್ಥಾನದ ಕಥೆಯೂ ತುಂಬಾ ಆಕರ್ಷಕ.
ಪವಿತ್ರ ಸಂಗಮದಲ್ಲಿ ಶಿವಲಿಂಗವನ್ನು ಸ್ಥಾಪಿಸುವ ಇಚ್ಛೆಯಿಂದ ಅಗಸ್ತ್ಯ ಮುನಿಗಳು ಹನುಮಂತನನ್ನು ಕರೆದು ಮೂರು ಮುಕ್ಕಾಲು ಘಳಿಗೆಯಲ್ಲಿ ಕಾಶಿಯಿಂದ ಲಿಂಗವೊಂದನ್ನು ತರಲು ಹೇಳುತ್ತಾರೆ. ಹನುಮಂತನು ಕಾಶಿಯಿಂದ ಲಿಂಗವೊಂದನ್ನು ತರುವಷ್ಟರಲ್ಲಿ ಮುಹೂರ್ತ ಮೀರುತ್ತುರಿವುದರಿಂದ,ಅಗಸ್ತ್ಯರು ಅಲ್ಲೇ ಒಂದು ಮರಳಿನ ಮಾಡಿ ಪ್ರತಿಷ್ಠಾಪಿಸಿ ಪೂಜಿಸಿದರು.
ಹನುಮಂತನು ಬಂದಾಗ ಪೂಜೆ ಮುಗಿದುದರಿಂದ ಹನುಮಂತನಿಗೆ ಅವಮಾನವಾಗಿ, ಆತನು ಸಿಟ್ಟಿನಿಂದ ಅಗಸ್ತ್ಯರು ಸ್ಥಾಪಿಸಿದ ಮರಳ ಲಿಂಗವನ್ನು ತುಂಡರಿಸಿದಾಗ ಅದರಿಂದ ಹರಿದ ನೀರಿನ ಬಗ್ಗೆಯೇ ಸ್ಪಟಿಕ ಸರೋವವಾಗಿ ಸಂಗಮದಲ್ಲಿ ಅಂತರ್ವಾಹಿನಿಯಾಗಿ ಸೇರಿಕೊಂಡಿತು.
ಹಾಗೆಯೇ ಪಕ್ಕದಲ್ಲಿದ್ದ ಗಣೇಶ ಗುಡಿಯಲ್ಲಿದ್ದ ಗಣೇಶ ಹಾಗೂ ಭಕ್ತರಿಂದ ಪ್ರತಿಷ್ಠಿತಗೊಂಡಿದ್ದ ನಾಗರ ಕಲ್ಲುಗಳಿಗೆ ಪ್ರದಕ್ಷಿಣೆ ಬಂದ, ತಲಕಾಡಿನತ್ತ ಹೊರಟೆವು.
ಪಕ್ಕದಲ್ಲೇ ಇದ್ದ ನರಸಿಂಹ ಸ್ವಾಮಿಯ ದರುಶನ ಪಡೆದು ಹೋಗೋಣ ಎಂದು ಕಾರು ನಿಲ್ಲಿಸಿ ದೇವಸ್ಥಾನದ ಒಳ ಹೋಗಿ ದೇವರ ದರ್ಶನ ಪಡೆದು ಅರ್ಚನೆ ಮಾಡಿಸಿ ಹೊರಬಂದು ತಲಕಾಡಿನತ್ತ ಪ್ರಯಾಣ ಮುಂದುವರಿಸಿದೆವು.
ಹಲಾವಾರು ದೇವಾಲಯಗಳನ್ನು,ಶಂಕರ ಮಠ ,ಸೋಸಲೆ ವ್ಯಾಸರಾಯ ಮಠ ಹಾಗೂ ಇತರ ಪಂಥಗಳ ಮಠ ಗಳನ್ನು ಒಳಗೊಂಡ ಈ ತಿರುಮಕೂಡಲು ನರಸಿಂಹಪುರ ದೇವಸ್ಥಾನಗಳ ಪಟ್ಟಣವೆಂದರೆ ಅತಿಶಯವಲ್ಲ.
ಇಲ್ಲೇ ೪ ಕಿ.ಮೀ. ದೂರದಲ್ಲಿರುವ ಗರ್ಗೇಶ್ವರ ದೇವಸ್ಥಾನ ಹಾಗೂ ಅಲ್ಲಿಯ ಭವಿಷ್ಯ ನುಡಿಯುವ ಯಂತ್ರ ಗಣಪತಿಯ ತಾಣವೂ ಇದೆಯಂತೆ. ಅದನ್ನು ಮುಂದಿನ ಬಾರಿ ಹೋದಾಗ ನೋಡಬೇಕೆಂಬಾಸೆ.
ಇಂತಿಹ ಇತಿಹಾಸಗಳಿಂದ ಸಂಪದ್ಭರಿತವಾದ ಈ ಪುಣ್ಯ ಭೂಮಿ ಬಂಗಳೂರಿನಿಂದ್ ೧೩೦ ಕಿ.ಮೀ. ದೂರದಲ್ಲಿದ್ದು ೨ಘಂಟೆಯಲ್ಲಿ ತಲುಪಬಲ್ಲುದಾಗಿದೆ. ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ ೩೫ ಕಿ.ಮೀ. ದೂರದಲ್ಲಿರುವ ಈ ಸ್ಥಳ ಗಂಗರ ರಾಜಧಾನಿ ತಲಕಾಡಿನ ಆಸು ಪಾಸಿನಲ್ಲಿದೆ.
ಈ ಜಾಗದಲ್ಲಿ ಪ್ರವಾಸಿಗಳ,ಯಾತ್ರಿಕರ ಅನುಕೂಲತೆಗಳಿಗಾಗಿ ವ್ಯವಸ್ಥೆಮಾಡಿದರೆ, ಸ್ವಚ್ಛತೆಯಕಡೆ ಗಮನ ಹರಿಸಿದರೆ, ಇದೊಂದು ಸುಂದರ ತೀರ್ಥ ಸ್ಥಳ ಹಾಗೂ ಪ್ರವಾಸೀ ತಾಣವಾಗುವದರಲ್ಲಿ ಸಂಶಯವಿಲ್ಲ.
ಇಲ್ಲಿಂದ ಹೊರಟ ನಮ್ಮ ಪಯಣ ಗಂಗರ ರಾಜಧಾನಿಯಾದ ತಲಕಾಡನ್ನು ಸೇರಿ ಅಲ್ಲಿಂದ ಮುಂದಕ್ಕೆ ಶಿವನಸಮುದ್ರದ ಚುಕ್ಕಿಗಳಾದ ಗಗನಚುಕ್ಕಿ ಭರಚುಕ್ಕಿಗಳನ್ನು ನೋಡಿದ ವಿವರಣೆ ಮುಂದಿನ ಕಂತು.
Comments