ನನ್ನ ಚಿಕ್ಕ ಆಸೆ
ಸ್ವಾತಿ ಮಳೆಹನಿಯಾಗಿ ಕಪ್ಪೆ ಚಿಪ್ಪನು ಸೇರಿ
ಮುತ್ತಾಗೊ ಆಸೆ ಇತ್ತು
ತಾವರೆ ಎಲೆಯಲ್ಲಿ ಹೊಳೆವ ಹನಿಯಾಗಿ ರವಿಯ
ಬಿಂಬಿಸುವ ಆಸೆ ಇತ್ತು
ನೀರು ಹುಲ್ಲಿನ ಕೊನೆಯನ್ನು ಸೇರಿ
ತಂಪಾಗೋ ಆಸೆ ಇತ್ತು
ಸಾಧನೆಯ ಗೈದ ಮುಗ್ಧ ಕಣ್ಣ್ಣುಗಳಲ್ಲಿ
ಭಾಷ್ಪವಾಗುವ ಆಸೆ ಇತ್ತು
ಆಟವಾಡುತಲಿರುವ ಮುದ್ದು ಕಂದಮ್ಮಗಳ
ಜೋಲ್ಲಾಗೋ ಆಸೆ ಇತ್ತು
ಹರಿವ ನೀರನು ಸೇರಿ ಹರಿ ಪಾದ ತೊಳೆದು
ತೀರ್ಥವಾಗುವ ಆಸೆ ಇತ್ತು
ನನ್ನೊಳಗೆ ಸೇರಿ ನನ್ನನೇ ನಾನರಿತು ನಾನೇ
ನಾನಾಗೋ ಆಸೆ ಇತ್ತು
ನಿನ್ನೊಳಗೆ ಸೇರಿ ನಿನ್ನ ಭಾವವನರಿತು
ನೀನಾಗೋ ಆಸೆ ಇತ್ತು
ಆಗಿಹೆನು ನಾನು ಆಸೆಯೆಲ್ಲವ ಬಿಟ್ಟು
ಭೋರ್ಗರೆದ ಮಳೆಯ ನೀರಾಗಿ
ಕಡಲನ್ನು ಸೇರಿ ಬೀಸು ಗಾಳಿಗೆ ಸಿಲುಕಿ
ಅಪ್ಪಳಿಸುತಲಿರುವ ತೆರೆಯಾಗಿ