ನಿಶೆಗೊಂದು ಪತ್ರ
ಬಾನ ಹಾಳೆಯ ಮೇಲೆ ಚುಕ್ಕೆಯಕ್ಷರತುಂಬಿ
ಬರೆದೆ ನಾ ಪತ್ರವನು ನಿಶೆಯ ಮನಕೆ
ಅರ್ಥವಾಗುವುದೆಷ್ಟೋ ಈ ಚುಕ್ಕೆಯಕ್ಷರವು
ನಡುವೆ ತುಂಬಿಸಿ ಇಟ್ಟ ಗ್ರಹ ಗತಿಯ ರೇಖೆ
ಶಶಿಯು ಮಧ್ಯದಿ ಬಂದು ಬಣ್ಣವನು ಚೆಲ್ಲಿದಳು
ಖಾಲಿ ಕಂಡಂಥ ಈ ಬಾನ ಪುಟಕೆ
ಕಳಿಸಿದೆನು ಪತ್ರವನು ಮಿಂಚಿನಂಚೆಯಲಿಟ್ಟು
ವರ್ಷನಾ ಜೊತೆಯಿರುವ ಎನ್ನ ನಿಶೆಗೆ
ಬರೆದಳುತ್ತರವನ್ನು, ಕಳಿಸಿದಳು ಕನಸಿನಲಿ
ಬಾನಿನೊಳು ಓಡಾಡೋ ಎನ್ನ ಮನಕೆ
ಬಣ್ಣಗಳು ಇತ್ತೆಷ್ಟೋ ಈ ನನ್ನ ಕನಸಿನಲಿ
ಪಡೆಯಿತಾಕಾರಗಳ ಮೋಡದಂತೆ
ಭಾವಗಳು ತುಂಬಿತ್ತೆ ಮೋಡದಾಕಾರಕ್ಕೆ
ಅರ್ಥಗಳು ಇಹುದೇನು ಸ್ವಪ್ನ ವರ್ಣಕ್ಕೆ ?
ಬದುಕು ಆಗಿಹುದೇನು ಪತ್ರಗಳ ಪುಸ್ತಕವು
ಕನಸುಗಳ ಉತ್ತರವು ಜೊತೆಗೆ ಸೇರಿ
ಬರೆದಿಹನೇ ಮುನ್ನುಡಿಯ ಕಾಲ ದೇವನು ಇದಕೆ
ಅರ್ಥವಾಗುವ ತೆರದಿ ನಿಮಿಷದಕ್ಷರದಿ