top of page
Search

ಯೋಧ ವಂದನೆ (ಹೆಮ್ಮೆಯ ಕರಾಡ ಯೋಧರ ಪರಿಚಯಾತ್ಮಕ ಲೇಖನ ಮಾಲೆ)

"ಜೀವನವನೆ ದೇವಿಗೆರೆವೆ ಬಿಡುತೆ ಗುಡಿಯ ಕಟ್ಟಲು

ಭರತ ಭೂಮಿ ನನ್ನ ತಾಯಿ ಎನ್ನ ಪೊರೆವ ತೊಟ್ಟಿಲು

ಸ್ವಾತಂತ್ರ್ಯದ ಸ್ವರ್ಗಕೇರೆ ಪುಣ್ಯದೇಣಿ ಮೆಟ್ಟಲು"


ಎಂಬ ಸೊಗಸಾದ ಸಾಲುಗಳನ್ನು ಬರೆದು ನಮ್ಮ ದೇಶಪ್ರೇಮ ಬಡಿದೆಬ್ಬಿಸುವ, ಭಾರತಮಾತೆಯ ಸೇನೆ-ಸೇವೆಯ ಬಗ್ಗೆ ವರ್ಣಿಸಿದವರು ರಾಷ್ಟ್ರಕವಿ ಕುವೆಂಪು.ದೇಶದ 130 ಕೋಟಿ ಜನವರ್ಗದಲ್ಲಿ ಸುಮಾರು ಮೂರನೇ ಎರಡರಷ್ಟು ಭಾಗ ಹಿಂದೂಗಳು. ಅವರಲ್ಲಿ ಸಣ್ಣ ಪ್ರಮಾಣ ಬ್ರಾಹ್ಮಣರದ್ದು. ಕರಾಡ ಸಮುದಾಯದ ಸಂಖ್ಯೆಯಂತೂ ತೀರಾ ಸಣ್ಣದು. ನಮ್ಮ ಸಮುದಾಯದ ಮೂಲ ವೃತ್ತಿ ಕೃಷಿ, ಅಧ್ಯಾಪನ, ಪೌರೋಹಿತ್ಯ, ಅಡುಗೆ ಇತ್ಯಾದಿ. ಇತ್ತೀಚಿನ ಒಂದೆರೆಡು ತಲೆಮಾರು ಈ ವೃತ್ತಿಗಳನ್ನು ಬಿಟ್ಟು ಬೇರೆ ವೃತ್ತಿಗಳತ್ತಲೂ ಗಮನ ಹರಿಸಿವೆ. ಆದರೂ ಸೇನೆಗೆ ಸೇರಿದವರ ಸಂಖ್ಯೆ ಕಡಿಮೆಯೇ. ಹೀಗಿದ್ದರೂ ಸಾಹಸ ಪರಾಕ್ರಮವನ್ನು ಬೇಡುವ ಈ ವೃತ್ತಿಯನ್ನು ಆಯ್ದುಕೊಂಡು ಯಶಸ್ವಿಯಾದ ಹಲವರು ನಮ್ಮ ನಡುವೆ ಇದ್ದಾರೆ. ಇವರ ಸೇವೆ ಸಮಾಜದ ಗಮನಕ್ಕೆ ಅಷ್ಟಾಗಿ ಬಂದಂತೆ ಕಾಣಿಸುವುದಿಲ್ಲ. ದೇಶದ ಭದ್ರತೆ, ರಾಷ್ಟ್ರೀಯತೆಯ ವಿಚಾರಗಳು ಮುನ್ನೆಲೆಗೆ ಬಂದಿರುವ ಇಂದಿನ ದಿನಗಳಲ್ಲಿ ಸೈನಿಕರ ಸೇವೆಯನ್ನು ಸ್ಮರಿಸುವುದು ಸಕಾಲಿಕ.

ಸೇನೆಯಲ್ಲಿ ಸೇವೆ ಸಲ್ಲಿಸಿರುವ ಮತ್ತು ಸಲ್ಲಿಸುತ್ತಿರುವ ಹಲವರಿಗೆ ಅಪ್ರತಿಮ ಸ್ವಾತಂತ್ರ್ಯ ಸೇನಾನಿಗಳ ಬದುಕು, ಅವರ ಹೋರಾಟದ ಹಾದಿ ಪ್ರೇರಣೆಯಾದರೆ ಇನ್ನು ಕೆಲವರಿಗೆ ಕಾಲೇಜು ದಿನಗಳಲ್ಲಿ ಪಡೆದ ಎನ್ ಸಿ ಸಿ ತರಬೇತಿ ಸ್ಫೂರ್ತಿಯಾಗಿದೆ. ಕೆಲವರು ಸ್ವಾತಂತ್ರ್ಯೋತ್ತರ ದಿನಗಳಲ್ಲಿ ದೇಶ ಸೇವೆಗಿರುವ ಏಕೈಕ ಪ್ರಶಸ್ತ ಮಾರ್ಗ ಇದೆಂದು ಸ್ವೀಕರಿಸಿ ಸೇನೆಗೆ ಧುಮುಕಿದವರು. ಇವೆಲ್ಲ ಪ್ರೇರಣೆಯೊಡನೆ ಇನ್ನೂ ಒಂದು ಪ್ರಮುಖ ವಿಚಾರವನ್ನು ಅಲ್ಲಗಳೆಯುವಂತಿಲ್ಲ. ಅದುವೇ ತಮ್ಮ ಹೆತ್ತವರಲ್ಲಿದ್ದ ದೇಶದ ಬಗೆಗಿನ ಅನನ್ಯ ಕಳಕಳಿ ಹಾಗೂ ನಿಷ್ಠೆ. ದೇಶದಲ್ಲಿ ಯುದ್ಧವಿರಲಿ ಇಲ್ಲದಿರಲಿ ಸೇನೆಯಲ್ಲಿ ಸೇವೆ ಸಲ್ಲಿಸುವವರು ಸಾವನ್ನು ಬೆನ್ನಿಗೆ ಕಟ್ಟಿಕೊಂಡೇ ಬದುಕಬೇಕು. ಈ ಸತ್ಯದ ಅರಿವಿದ್ದೂ ಮಕ್ಕಳನ್ನು ಸೇನೆಗೆ ಸೇರಿಸುವವರ ದಿಟ್ಟ ನಿರ್ಧಾರದ ಹಿಂದೆ ದೊಡ್ಡ ತ್ಯಾಗವಿದೆ ಎಂಬುದನ್ನು ಮರೆಯಬಾರದು.

ದೇಶ ಕಾಯುವ ಅತಿ ಕಷ್ಟದ ಕೆಲಸವನ್ನು ನಮ್ಮ ನಡುವಿನ ಹಲವಾರು ಸೈನಿಕರು ಶ್ರದ್ಧೆ, ಪ್ರೀತಿ ಮತ್ತು ಹೆಮ್ಮೆಯಿಂದ ಮಾಡುತ್ತಿದ್ದಾರೆ. ಅಂಥವರನ್ನು ಹುಡುಕಿ, ಗುರುತಿಸಿ ಅವರ ಬಗೆಗಿನ ವಿವರ ನೀಡಿ, ಸಮಾಜದ ಸರ್ವರಿಗೂ ಅವರನ್ನು ಪರಿಚಯಿಸಿ ಆ ಮೂಲಕ ಗೌರವ ನೀಡುವುದು ’ಯೋಧ ವಂದನೆ’ ಲೇಖನ ಮಾಲೆಯ ಉದ್ದೇಶ. ಈ ಸಂಚಿಕೆಯಿಂದ ಮೊದಲ್ಗೊಂಡು ಮುಂದಿನ ಕೆಲವು ಕಂತುಗಳಲ್ಲಿ ಸೇನೆಗೆ ಕೆಲಸ ಮಾಡಿದ ನಮ್ಮ ನಡುವಿನವರ ವಿವರ-ಪರಿಚಯ ನೀಡುವ ಪ್ರಯತ್ನ ಆರಂಭಿಸಿದ್ದೇವೆ. ಯುವ ಪೀಳಿಗೆಗೆ ಇವರ ಸಾಧನೆಗಳು ಪ್ರೇರಣೆಯಾಗಲಿ.

"ರಾಷ್ಟ್ರ ಸುರಕ್ಷಿತವಾಗಿದ್ದಾಗ ಮಾತ್ರ ಉಳಿದದ್ದೆಲ್ಲವೂ ಮತ್ತು ನಾವೆಲ್ಲ ನೆಮ್ಮದಿಯಿಂದ ಬಾಳುವಂತಾಗಲು ಸಾಧ್ಯ; ಧೈರ್ಯ-ಶೌರ್ಯದಿಂದ ದೇಶ ರಕ್ಷಿಸುವ ಯೋಧ ಮನೆಮನೆಯಲ್ಲಿ ಹುಟ್ಟಿ ಬರಲಿ..";

ನಾವು ಸಂಗ್ರಹಿಸಿ ಪ್ರಕಟಗೊಳಿಸುತ್ತಿರುವ ನಮ್ಮ ನಡುವಿನ ಸೈನಿಕರ ವಿವರಗಳು ’ಯೋಧ ವಂದನೆ’ ಅಂಕಣದಲ್ಲಿ ಯಾದೃಚ್ಚಿಕ ಶ್ರೇಣಿಯಲ್ಲಿ ಮುಂದಿನ ಕೆಲವು ತಿಂಗಳು ಪ್ರಕಟಗೊಳ್ಳಲಿವೆ. ಒಪ್ಪಿಸಿಕೊಳ್ಳಿ - ಅವರೆಡೆಗಿನ ಒಂದು ಶ್ರೇಷ್ಠ ಧನ್ಯತೆಯೊಂದಿಗೆ, ’ಇವರು ನಮ್ಮವರು’ ಎನ್ನುವ ಮನದಾಳದ ಪ್ರೀತಿ - ಗೌರವಾದರಗಳೊಂದಿಗೆ !

ಪರಿಚಯ ಲೇಖನದ ಭಾಗವಾಗಿ ಪ್ರತಿಯೊಬ್ಬ ಸಾಧಕ ಯೋಧರ ಸಂಪರ್ಕ ಸಂಖ್ಯೆಯನ್ನೂ ನೀಡಿದ್ದೇವೆ. ಸಂಪರ್ಕಿಸಿ

ಅಭಿನಂದನೆ ತಿಳಿಸಲು ಇದೊಂದು ಸುಸಂದರ್ಭ. "ಯೋಧವಂದನೆ" ಸರಣಿಯ ಬಗೆಗಿನ ಅನಿಸಿಕೆ-ಅಭಿಪ್ರಾಯಗಳನ್ನು ಟಂಕಿಸಲು ಮರೆಯದಿರಿ




ಯೋಧ ವಂದನೆ (Aug 2019 onwards till July 2020)

(Article Series published in Karadavani Monthly Magazine)

ಯಾವುದೇ ದೇಶದ ಇತಿಹಾಸ ತೆಗೆದುಕೊಂಡರೂ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲಘಟ್ಟ, ಎರಡೂ ಮಹತ್ವದ ಪಾತ್ರ ನಿರ್ವಹಿಸುತ್ತವೆ. ದೇಶದ ೧೨೫ ಕೋಟಿ ಜನವರ್ಗದಲ್ಲಿ ಸುಮಾರು ಎರಡನೇ ಮೂರು ಅಂಶ ಹಿಂದೂಗಳು. ಅದರಲ್ಲಿ ಒಂದಿಷ್ಟು ಜನ ಬ್ರಾಹ್ಮಣ ವರ್ಗಕ್ಕೆ ಸೇರಿದವರು. ಅದರಲ್ಲಿ ನಮ್ಮದು ’ಕರಾಡ’ ಎಂಬ ಸಣ್ಣದೊಂದು ಸಮುದಾಯ. ದೇಶದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ನಾವು ’ಲೆಕ್ಕಕ್ಕಿಲ್ಲದವರು’. ಹೀಗಿದ್ದರೂ ಇಷ್ಟೊಂದು ದೊಡ್ಡ ದೇಶದಲ್ಲಿ ಅದೆಷ್ಟೋ ಜನ ನಮ್ಮ ಭಾರತೀಯ ಸೇನೆಗೆ ಸೇರಲು ಬೇಕಾದ ಎಲ್ಲ ಅರ್ಹತೆಯನ್ನು ಹೊಂದಿದ್ದರೂ, ನಮ್ಮ ವರ್ಗದ ಜನ ಇದಕ್ಕೆ ಏಕೆ ಸೇರಬೇಕೆನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ನಮ್ಮ ಜಾಯಮಾನಕ್ಕೆ ಸರಿಹೊಂದುವ ತೀರಾ ಹತ್ತಿರದ ವೃತ್ತಿಗಳಾದ ಕೃಷಿ, ಅಧ್ಯಾಪನ, ಪೌರೋಹಿತ್ಯ ಇತ್ಯಾದಿಗಳಿಗಿಂತ ಬಹಳ ಭಿನ್ನವಾದ ಹಾಗೂ ಸಾಹಸ,ಪರಾಕ್ರಮಕ್ಕೆ ಹೆಸರಾದ ಸೈನಿಕ ವೃತ್ತಿಗೆ ಸೇರಿದುದಕ್ಕೆ ಪ್ರತಿಯೊಬ್ಬರಲ್ಲೂ ಪ್ರೇರಣೆ ನೀಡಿದ ಬಲವಾದ ಒಂದು ಕಾರಣ ಇದ್ದಿರಲೇಬೇಕು.


ಇದನ್ನು ಸಮಗ್ರ ದೃಷ್ಟಿಯಲ್ಲಿ ಅವಲೋಕಿಸಿದರೆ ಕೆಲವರಿಗೆ ಅಪ್ರತಿಮ ಸ್ವಾತಂತ್ರ್ಯ ಸೇನಾನಿಗಳ ಬದುಕು, ಅವರ ಹೋರಾಟದ ಹಾದಿ ಪ್ರೇರಣೆಯಾದರೆ ಇನ್ನು ಕೆಲವರಿಗೆ ಕಾಲೇಜು ದಿನದ ಎನ್ ಸಿ ಸಿ ತರಬೇತಿ ಕಾರಣವಾಗಿದೆ. ಇನ್ನು ಕೆಲವರು ಸ್ವಾತಂತ್ರ್ಯೋತ್ತರ ದಿನದಲ್ಲಿ ದೇಶ ಸೇವೆಗಿರುವ ಏಕೈಕ ಪ್ರಶಸ್ತ ಮಾರ್ಗ ಇದೆಂದು ಸ್ವೀಕರಿಸಿ ಸೇನೆಗೆ ಧುಮುಕಿದವರು. ಇವೆಲ್ಲ ಪ್ರೇರಣೆಯೊಡನೆ ಇನ್ನೂ ಒಂದು

ಪ್ರಮುಖ ವಿಚಾರವನ್ನು ಅಲ್ಲಗಳೆಯುವಂತಿಲ್ಲ. ಅದುವೇ ತಮ್ಮ ಹೆತ್ತವರಲ್ಲಿದ್ದ ದೇಶದ ಬಗೆಗಿನ ಅನನ್ಯ ಕಳಕಳಿ ಹಾಗೂ ನಿಷ್ಠೆ. ದೇಶದಲ್ಲಿ ಯುದ್ಧವಿರಲಿ ಇಲ್ಲದಿರಲಿ ಸೇನೆಯಲ್ಲಿ ಸೇವೆ ಸಲ್ಲಿಸುವವರ ಬದುಕು ಯಾವತ್ತೂ ಕಠೋರ ಹಾಗೂ ಸಾವು-ಬದುಕಿನ ನಡುವೆ ಇರುತ್ತದೆಂಬುದಂತು ಸತ್ಯ. ಇಂಥ ಕಠೋರ ಸತ್ಯಗಳ ಅರಿವಿದ್ದೂ ತಮ್ಮ ಮಕ್ಕಳನ್ನು ಸೇನೆಗೆ ಸೇರುವಂತೆ ಒಲವು ತೋರಿದ ನಿರ್ಧಾರದ ಹಿಂದೊಂದು ದೊಡ್ಡ ತ್ಯಾಗವಿದೆ.

ಇಂಥದೊಂದು ಕಠಿಣ ದಾರಿ ಸ್ವೀಕರಿಸಿ ’ಸೈ’ ಎನ್ನಿಸಿಕೊಂಡ ನಮ್ಮ ಕರಾಡದ ಅನೇಕ ಯೋಧರು ನಮ್ಮೊಂದಿಗೆ ತಮ್ಮ ಬದುಕಿನ ಅನೇಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಅವರ ಬಗೆಗಿನ ಒಂದು ಕಿರು ಪರಿಚಯ ಹಾಗೂ ಅವರ ಬದುಕಿಗಾದ ಪ್ರೇರಣೆ, ಅನುಭವಗಳನ್ನು ಓದುಗರಿಗೆ ಪರಿಚಯಿಸುವ ದೃಷ್ಟಿಯಿಂದ ಇದೊಂದು ಸಣ್ಣ ಪ್ರಯತ್ನ. ಇದರಿಂದ ಪ್ರೇರಣೆ ಪಡೆದು ನಮ್ಮ ಮುಂದಿನ ತಲೆಮಾರಿನ ಮಕ್ಕಳು ದೇಶ ಸೇವೆಯ ಪಥದಲ್ಲಿ ಮುಂಬರಬಹುದೆನ್ನುವುದೇ ಇದರ ಒಟ್ಟು ಆಶಯ.

(End of the Article)

ಇದೇ ಶೀರ್ಷಿಕೆಯಡಿ ಮುಂದಿನ ತಿಂಗಳ ಸಂಚಿಕೆಗಳಲ್ಲೂ ನಮ್ಮ ಹೆಮ್ಮೆಯ ಸೈನಿಕರ ಬಗೆಗಿನ ಪರಿಚಯಾತ್ಮಕ ಲೇಖನ ಮಾಲೆ ಮುಂದುವರಿಯಲಿದೆ. ಪ್ರಸ್ತುತ ನಮಗೆ ಬಂದಿರುವ ಮಾಹಿತಿಯ ಆಧಾರದ ಮೇಲೆ ಈ ಮೇಲಿನ ಆರಿಸಲಾಗಿದೆ. ಈತನಕ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು ಅಥವಾ ಸಲ್ಲಿಸುತ್ತಿರುವವರು ಈತನಕ ನಮಗೆ ಮಾಹಿತಿ ಒದಗಿಸದಿದ್ದಲ್ಲಿ ಶ್ರೀಯುತ ನಾಗರಾಜ್ ಉಪ್ಪಂಗಳ (95350 00365) ಇವರನ್ನು ಸಂಪರ್ಕಿಸಬಹುದು.


------------------------------------------------------------------

 ವಿಷ್ಣು ಭಟ್ , 5/4/1942


ಮನೆ/ಮನೆತನ : 

ಗುಲುಗುಂಜಿ, ಕುಂಬ್ಡಾಜೆ ಗ್ರಾಮ

ಹೆತ್ತವರ ವಿವರ : 

ಸುಬ್ರಹ್ಮಣ್ಯ ಭಟ್ ಹಾಗೂ ಲಕ್ಷ್ಮೀ ದೇವಿ

ಪರಿವಾರದ ವಿವರ :

ಪತ್ನಿ ಹಾಗೂ ಮಗಳು

ಸೇವಾ ಅವಧಿ : 

1965 ರಿಂದ 1998 - 33 ವರ್ಷಗಳ ಸುದೀರ್ಘ ಸೇವೆ

ಸೇವೆ ಸಲ್ಲಿಸಿದ ವಿಭಾಗ :

ವಾಯು ಸೇನಾ ಸಿಬ್ಬಂದಿಗಳ ಸಹಾಯಕ ಮುಖ್ಯಸ್ಥರಾಗಿ (ಹಣಕಾಸು ಯೋಜನಾ ವಿಭಾಗ) ಭಾರತೀಯ ವಾಯು ಸೇನೆಯಲ್ಲಿ ಸೇವೆ.

ಪ್ರಶಸ್ತಿ/ಗೌರವ :

ವಾಯು ಸೇನಾ ಸಿಬ್ಬಂದಿಗಳ ಸಹಾಯಕ ಮುಖ್ಯಸ್ಥರ ತರಬೇತಿಯ ಅವಧಿಯಲ್ಲಿ ಚಿನ್ನದ ಪದಕ, ಎರಡುಬಾರಿ ಪ್ರಶಂಸಾ ಪತ್ರ.

ಅವಿಸ್ಮರಣೀಯ ಅನುಭವ :

ಸಂಪೂರ್ಣ ಸೇವಾ ಅವಧಿ ಸದಾ ಸ್ಮರಣೀಯ

ಪ್ರೇರಣೆ : 

ಸೇನೆಯವರು ಧರಿಸುತ್ತಿದ್ದ ಸಮವಸ್ತ್ರದ ಆಕರ್ಷಣೆ

ಸಮಾಜಕ್ಕೆ ಸಂದೇಶ : 

ಸೇನಾ ಬದುಕು ಶಿಸ್ತು, ಸಾಹಸ, ಅವಕಾಶ ಹಾಗೂ ಗುಣಮಟ್ಟದ ಬದುಕನ್ನು ಕಲ್ಪಿಸುತ್ತದೆ. ಹೊಸ ಹೊಸ ಸ್ಥಳಗಳ ಪರಿಚಯದ ಜೊತೆಗೆ ಹೊಸ ಭಾಷೆ,ಹೊಸ ಜನ, ವಿಭಿನ್ನ ವರ್ಗದ ಜನರ ಒಡನಾಟ ಬದುಕಿನುದ್ದಕ್ಕೂ ವಿಶ್ವಸನೀಯ ಸಂಬಂಧಗಳನ್ನು ನೆನಪಿಸಿಕೊಡುತ್ತದೆ. ಇದೆಲ್ಲವನ್ನೂ ಸಾಧಿಸಿ ’ಸೈ’ ಎನಿಸಿಕೊಳ್ಳಲು ನಮ್ಮವರು ಸೈನ್ಯ ಸೇರಬೇಕು.

ಸಂಪರ್ಕ ಸಂಖ್ಯೆ :

 9945201810


 
 
 

2 Comments


ಸ್ಪೂರ್ತಿದಾಯಕ ಸೇವೆಯ ಸಾರ್ಥಕತೆ, ನಮಗೆಲ್ಲ ಪರಿಚಯಿಸಿದ್ದಕ್ಕೆ ಧನ್ಯವಾದಗಳು

Like

KS Bhat
KS Bhat
Mar 21, 2024

ವಾಯು ಸೇನೆಯಲ್ಲಿ 33 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದಂತಹ ಗುಲುಗುಂಜಿ ವಿಷ್ಣು ಭಟ್ಟರು ನಮ್ಮ ಸಮಾಜಕ್ಕೆ ಬ್ಲಡ್ ಬ್ಯಾಂಕ್  ಮೂಲಕ ಕೂಡ ತುಂಬಾ ಸಹಾಯ ಮಾಡಿದ್ದಾರೆ.  ಅವರಿಗೆ ದೇವರು ಆಯುರಾರೋಗ್ಯವನ್ನು ಕೊಟ್ಟು ಸಮಾಜಕ್ಕೆ ಇನ್ನೂ ಹೆಚ್ಚಿನ ಸಹಾಯ  ಮಾಡುವ ಶಕ್ತಿ  ಕೊಡಲಿ ಎಂಬುದಾಗಿ ಶುಭ ಹಾರೈಸುತ್ತೇನೆ. 

Like

Sincere Thanks to all the people who are directly or indirectly helped us to collect and consolidate the information

Subscribe Form

Thanks for submitting!

Thin Title

  • Blogger

©2021 by Karada Brahmana Samaja.

09980536158

bottom of page