top of page
Search

ವಾರ್ಧಕ್ಯ - ಸಮೃದ್ಧವೂ, ಆಪ್ಯಾಯಮಾನವೂ -by ರವೀ ಸಜಂಗದ್ದೆ

Writer: Aravinda MundakanaAravinda Mundakana

Updated: Feb 26, 2024

ಶಿಲಾಯುಗದಿಂದ ಆರಂಭಗೊಂಡ ನಾಗರಿಕತೆ ಬೆಳೆದು, ಮಧ್ಯ ಯುಗವು ಸಂದು, ಆಧುನಿಕ ಯುಗದ ಸ್ಪರ್ಶ ಸಿಕ್ಕಿ, 5G ಝಮಾನಾದಲ್ಲಿ ಪ್ರಪಂಚ ಮತ್ತು ಬದುಕು ವೇಗವಾಗಿ ಮುನ್ನುಗುತ್ತಿವೆ. ಸಂಸಾರ, ಸಂಬಂಧ, ತಾಪತ್ರಯ, ಜಂಜಾಟ, ಕಷ್ಟ-ನಷ್ಟ, ಬಾಲ್ಯ, ಯೌವನ, ಹರೆಯ, ವೃದ್ಧಾಪ್ಯ, ವಾನಪ್ರಸ್ಥ, ಒಂಟಿ ಜೀವ ಇವೆಲ್ಲ ಬದುಕಿನ ಬವಣೆಯ ಅವಿಭಾಜ್ಯ ಮತ್ತು ಅಷ್ಟೇ ಅನನ್ಯ ಹಂತಗಳು. ಬಾಲ್ಯ-ಯೌವನ-ಹರೆಯದ ಹಂತದ್ದು ಒಂದು ತೂಕವಾದರೆ, ವೃದ್ಧಾಪ್ಯ-ವಾನಪ್ರಸ್ಥ ಹಂತಗಳ ತೂಕ ಇನ್ನೊಂದು - ಮತ್ತದು ಮೊದಲಿನವುಗಳಿಗಿಂತ ಒಂದು ಪಾವು ಹೆಚ್ಚು ತೂಕದ್ದು ಮತ್ತು ಭಾರದ್ದು! ಮನುಷ್ಯ ತನಗಾಗಿ, ತನ್ನಿಷ್ಟದಂತೆ, ತಾನಂದುಕೊಂಡಂತೆ ಬದುಕಲು, ಇಳಿ ವಯಸ್ಸಿನಲ್ಲಿ ಆರಾಮವಾಗಿ ನಿವೃತ್ತ ಜೀವನ ಸಾಗಿಸಲು ಇರುವ ಏಕೈಕ ಹಂತ ವೃದ್ಧಾಪ್ಯ-ವಾನಪ್ರಸ್ಥ. ವೃದ್ಧಾಪ್ಯದ ಕವಲುಗಳು, ಮಜಲುಗಳು, ಹಂತಗಳು, ರೋಚಕತೆ ಮತ್ತದನ್ನು ಸೂಕ್ತ ಮತ್ತು ಸಮಂಜಸವಾಗಿ ಬದುಕಬಹುದಾದ ಬಗೆಗಿನ ವಿಷದವಾದ ವಿವರಣೆಯ ಪ್ರಯತ್ನ ಇಲ್ಲಿ ಮಾಡಲಾಗಿದೆ.

ವೃದ್ಧಾಪ್ಯ, ಇಳಿವಯಸ್ಸು ಎಂದಾಕ್ಷಣ ಮೂಗು ಮುರಿಯುವ, ಮುಖ ಸಿಂಡರಿಸುವ, 'ಪರಿವಾರಕ್ಕೆ ಹೊರೆ' ಅನಿಸುವ ವಾತಾವರಣ ನಿರ್ಮಾಣವಾಗಿ, ವೃದ್ಧರೆಂದರೆ 'ಬಹುತೇಕ ಯಾರಿಗೂ ಬೇಡವಾದ ಜೀವಿಗಳು' ಎಂಬಂತಾಗಿರುವುದು ಮುಂದುವರಿದ ಈ ಸಮಾಜದ ಅಗ್ಗಳಿಕೆ. ಆದರೆ ಹೆಚ್ಚಿನವರಿಗೆ ಗೊತ್ತಿಲ್ಲದಿರುವ, ಗೊತ್ತಿದ್ದರೂ ಒಪ್ಪಿಕೊಳ್ಳಲು ತಯಾರಿಲ್ಲದಿರುವ ವಿಷಯ-ವಿಚಾರವೆಂದರೆ ವೃದ್ಧಾಪ್ಯ, ಇಳಿವಯಸ್ಸು, ನಿವೃತ್ತ ಜೀವನ ಒಂಥರಾ ಅಪ್ಯಾಯಮಾನವಾದದ್ದು, ಕೌತುಕ ಉಳ್ಳದ್ದು ಮತ್ತು ಜೀವನವನ್ನು ಅತ್ಯಂತ ಆನಂದ, ಸಂತೋಷ, ತಂತಮ್ಮ ಇಷ್ಟಾನುಸಾರ ಮತ್ತು ನೆಮ್ಮದಿಯಿಂದ ಕಳೆಯಬಹುದಾದ ಬದುಕಿನ ಶ್ರೇಷ್ಠ ಹಂತ-ಘಟ್ಟ ಎನ್ನುವುದು!

ವೃದ್ಧ ತಂದೆ-ತಾಯಿಗಳು ಊರಿನ ಹಳ್ಳಿಯ ಕೃಷಿ ಮನೆಗಳಲ್ಲಿದ್ದು, ಮಕ್ಕಳು ವೃತ್ತಿ ನಿಮಿತ್ತ ದೂರದ ಊರುಗಳಲ್ಲಿ, ನಗರ ಪ್ರದೇಶಗಳಲ್ಲಿ ನೆಲೆಸಿರುವ ಪರಿಸ್ಥಿತಿ ಹೆಚ್ಚಿನ ಮನೆಗಳಲ್ಲಿ/ಕುಟುಂಬಗಳಲ್ಲಿ ಕಂಡು ಬರುತ್ತಿದೆ. That's the need of the hour ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ! ಅತ್ತ ಹುಟ್ಟಿ ಬೆಳೆದ ಪರಿಸರ ಬಿಟ್ಟು ನಗರಕ್ಕೆ ಹೋಗಲಾಗದೆ, ಇತ್ತ ವಯಸ್ಸಿನ ಕಾರಣದಿಂದಾಗಿ ಮೊದಲಿನಂತೆ ಕೃಷಿಯನ್ನೂ ಮಾಡಲಾಗದೆ ಇಕ್ಕಟ್ಟಿಗೆ ಸಿಲುಕಿರುವ ವೃದ್ಧ ಕುಟುಂಬಗಳು ಹಲವು. 'ಅತ್ತ ದರಿ ಇತ್ತ ಪುಲಿ' ಎಂಬಂತಾಗಿದೆ ಅವರ ಪರಿಸ್ಥಿತಿ. ಅವರೆಲ್ಲರೂ ಈಗಿನ ತಂತ್ರಜ್ಞಾನ ಯುಗದಲ್ಲಿ ಪ್ರತಿದಿನವೂ ಮಕ್ಕಳು-ಮೊಮ್ಮಕ್ಕಳೊಂದಿಗೆ ಸಂಭಾಷಣೆ, ವಿಡಿಯೋ ಕಾಲ್, virtual meeting ಇತ್ಯಾದಿಗಳ ಮೂಲಕ ನಿರಂತರ ಸಂಪರ್ಕ ಸಾಧಿಸಿ, ತಮಗೆ ಇಷ್ಟವಾದದ್ದನ್ನು ಮೊಬೈಲಿನ ಸಹಾಯದಿಂದ ನೋಡಿ, ಕೇಳಿ ಮನದ ನೆಮ್ಮದಿಗೆ ಇಂಬು ಕೊಡಲು ವಿಪುಲ ಅವಕಾಶಗಳಿವೆ. ಆಗಿನ ಕಾಲದಲ್ಲಿ ಇದ್ದಂತೆ, ಕೃಷಿ ಭೂಮಿಯ ವರಮಾನವನ್ನೇ ನಂಬಿಕೊಂಡು ಬದುಕನ್ನು ಮುನ್ನಡೆಸಬೇಕಾದ ದಿನಗಳು ಈಗಿಲ್ಲವಾದ್ದರಿಂದ, ಎಷ್ಟು ಸಾಧ್ಯವೋ ಅಷ್ಟು ಕೆಲಸಾವಳಿಯನ್ನು ಮಾಡಿ, ಸಂಜೆಯ ವೇಳೆಗೆ ಊರ ಮನೆಯ ಜಗುಲಿಯಲ್ಲಿ ಕುಳಿತು ಅಥವಾ ತೋಟದ ಹಸಿರಿನ ಮಧ್ಯೆ ಕಾಲ ಕಳೆಯುತ್ತಾ ನೆಮ್ಮದಿಯಾಗಿದ್ದು, ಬದುಕನ್ನು ಸಮಾಧಾನದಿಂದ ಆಸ್ವಾದಿಸುತ್ತಾ ರಾತ್ರಿ ಒಳ್ಳೆಯ ನಿದ್ದೆ ಮಾಡುವುದು ಜಾಣತನ ಮತ್ತು ಈಗಿನ ದರ್ದು ತುರ್ತು ಎರಡೂ ಹೌದು. ಆ ಪರಿಸರದಲ್ಲಿರುವ ತನ್ನಂತೇ ಇರುವ ವೃದ್ಧರಿಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ-ಸಹಕಾರ-ನಲ್ನುಡಿ, ಯಾವಾಗ ಬೇಕೆನಿಸಿತೋ ಆಗ ಮಾಡಬೇಕೆನಿಸಿದ ಕೆಲಸ ಕಾರ್ಯಗಳಲ್ಲಿ ತೊಡಗಿಸಿ, ಬೇಕೆನಿಸಿದಂತೆ, ಇಷ್ಟದಂತೆ ವಿಶ್ರಾಂತ ಜೀವನ ನಡೆಸುತ್ತಾ ಯಾವುದೇ ಮತ್ತು ಯಾರದೇ ಹಂಗು ಇಲ್ಲದೇ ದಿನಗಳೆಯುವುದು ನಿಜಾರ್ಥದಲ್ಲಿ ಸುಂದರ-ಸಮೃದ್ಧ ಜೀವನ. ಹಬ್ಬ-ಹರಿದಿನಗಳಲ್ಲಿ ಊರಿಗೆ ಬರುವ ಮಕ್ಕಳು-ಮೊಮ್ಮಕ್ಕಳು ಮತ್ತು ಸಂಬಂಧಿಕರೊಂದಿಗೆ ಸುಖವಾಗಿ, ಗಮ್ಮತ್ತಾಗಿ ಕಾಲ ಕಳೆದು, ವರುಷದ ಇತರ ದಿನಗಳನ್ನು ಸ್ಥಳೀಯ ಸಮಕಾಲೀನರೊಡನೆ ಪರಸ್ಪರ ಸದ್ವಿನಿಯೋಗಿಸಿಕೊಂಡು ಬಾಳಿದರೆ ಸ್ವರ್ಗಕ್ಕೆ ಮೂರೇ ಗೇಣು!

ಮಂಡಿ ನೋವು, ಸಕ್ಕರೆ ಕಾಯಿಲೆ, ಅಜೀರ್ಣ, ನಿರಂತರ ಕಾಡುವ ಒಣ ಕೆಮ್ಮು, ಹೃದಯ ಸಂಬಂಧಿ ಸಣ್ಣಪುಟ್ಟ ತೊಂದರೆ, ಸೊಂಟ ಬೇನೆ ಮತ್ತಿತರ ವಯೋಸಹಜ ಕಾಯಿಲೆಗಳನ್ನು ಔಷಧಿ ಮತ್ತಿತರ ಸಾಮಗ್ರಿಗಳನ್ನು ಬಳಸಿ ತಹಬಂದಿಯಲ್ಲಿಟ್ಟು, ಬೇಕಾದ ಕಾಳಜಿ ವಹಿಸಿ, ಆಗಾಗ ಬೇಕಾದ ಶುಶ್ರೂಷೆ ಮಾಡಿಸಿಕೊಂಡು, ಪರಿಸರದ ನಡುವೆ ಶುದ್ಧ ಗಾಳಿ, ಬೆಳಕು, ನೀರು, ಆಹಾರದೊಂದಿಗೆ ಬದುಕುವ ಭಾಗ್ಯ ವೃದ್ಧಾಪ್ಯದ ಅತಿ ಸುಂದರ-ವರ್ಣರಂಜಿತ ಮೇರುಸ್ತರ! ಈ ರೀತಿ ಬದುಕು ಸವೆಸುವವರು ಕಾಲಕ್ಕೆ ತಕ್ಕಂತೆ ಮನಸು ಮತ್ತು ಯೋಚನಾ ಲಹರಿ ಬದಲಾಯಿಸಿ, ಸಮಚಿತ್ತ- ಸಮಾಧಾನವನ್ನು ತಂದುಕೊಂಡರೆ ಬದುಕು ಸುಂದರ ಸುಲಲಿತ. ನೋವು, ಸಂಕಟ, ಅನಾರೋಗ್ಯ ಇವೆಲ್ಲ ಜೀವನದ ಅವಿಭಾಜ್ಯ ಅಂಗಗಳು. ಅವೆಲ್ಲವನ್ನು ಮೀರಿದ ಜೀವನ ಬಹಳ ಸುಂದರವಾಗಿದೆ ಎಂಬಂತಹ ದೃಷ್ಟಿಕೋನದೊಂದಿಗೆ ಬದುಕುವ ರೀತಿ, ಮನಸ್ಸಿನ ಪರಿಮಿತಿ, ಎಲ್ಲವನ್ನೂ ನಿಭಾಯಿಸುವ ನಿಮ್ಮೊಳಗಿನ ಪರಿಭಾಷೆ ಬದಲಾಗಬೇಕಷ್ಟೆ.

ಇನ್ನೂ ಕೆಲ ವೃದ್ಧರು ಮಕ್ಕಳ ಒತ್ತಾಸೆಗೆ ಅಥವಾ ಇನ್ಯಾವುದೋ ಕಾರಣಗಳಿಂದಾಗಿ ನಗರಗಳಲ್ಲಿ ನೆಲೆಯೂರಿರುವ ಮಕ್ಕಳ ಸಂಸಾರದೊಡನೆ ನಾಲ್ಕು ಗೋಡೆಗಳ ಕೋಣೆಯಲ್ಲಿ ಇಷ್ಟವಿದ್ದೋ ಇಲ್ಲದೆಯೋ ತಮ್ಮ ಬದುಕನ್ನು ಸವೆಸುತ್ತಿರುತ್ತಾರೆ. ಸಹಜವಾಗಿ ತಮ್ಮ ಅನಂತರದ ಎರಡೂ ಪೀಳಿಗೆಗಳೊಡನೆ (ಮಕ್ಕಳು, ಮೊಮ್ಮಕ್ಕಳು) ಬದುಕುವುದು ಅಷ್ಟು ಸುಲಭವಲ್ಲ, ಸರಳವೂ ಅಲ್ಲ. ಹಾಗೆಂದು ಆ ಬಗ್ಗೆ ಚಿಂತಿಸಿ, ಯೋಚಿಸಿ, ಮರುಗುತ್ತಾ ಕಾಲ ಕಳೆಯುವುದು ಸಾಧುವಲ್ಲ, ಸಮಂಜಸವಂತೂ ಅಲ್ಲವೇ ಅಲ್ಲ. ಅದು ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುವುದು ನಿಕ್ಕಿ. ಯೋಚನಾ ಲಹರಿ ಬದಲಾಯಿಸಿಕೊಂಡು, ಇಷ್ಟು ವರ್ಷಗಳ ಕಾಲ ಇತರರಿಗಾಗಿ ಬದುಕಿದ್ದೀರಿ, ಈಗ ನಿಮಗಾಗಿ ಬದುಕಿ, ನಿಮ್ಮ ಖುಷಿ, ನಿಮ್ಮ ಆರೋಗ್ಯ, ನಿಮ್ಮ ಬೇಕು-ಬೇಡಗಳ ಬಗ್ಗೆ ಗಮನ ಕೊಡಿ. ಮಕ್ಕಳು-ಮರಿಮಕ್ಕಳ ಜೊತೆಯಾಗಿ ಬಾಳುವ, ಹಂಚಿ ತಿನ್ನುವ ಮನಸ್ಸು-ಹೃದಯ-ಗರಿಮೆ ಸದಾ ಇರಲಿ. ನಿಮಗಿಷ್ಟದ ಕೆಲಸಗಳನ್ನು ಮಾಡುವಲ್ಲಿ ಸಮಯ ವ್ಯಯಿಸಿ. ಸಂಜೆ ವೇಳೆ ಮೊಮ್ಮಕ್ಕಳು ಹೋಂವರ್ಕ್ ಮಾಡುವಾಗ ಅವರ ಅಪ್ಪ ಅಮ್ಮನ ಬೈಗಳು ನಿಮ್ಮ ಕರುಳು ಚುರ್ ಅನ್ನಿಸುವುದು ಸಾಮಾನ್ಯ. ಇಂಥಾ ಅನೇಕ ಸಣ್ಣಪುಟ್ಟ ಕಿರಿಕಿರಿಗಳಿಂದ, ಮನಕೆ ಬೇಸರವೆನಿಸುವ ಸಂಗತಿಗಳಿಂದ ವಿಮುಖರಾಗಲು ಸಂಗಾತಿಯೊಂದಿಗೆ ಬಡಾವಣೆಯ ಪಾರ್ಕಿನಲ್ಲೊಂದು ಸುತ್ತು ಹಾಕಲು ಮರೆಯದಿರಿ. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು, ಮನಸ್ಸಿನ ಸಮಾಧಾನಕ್ಕೂ ಇದು ಸಹಕಾರಿ!

ಸಮಾನ ಮನಸ್ಕರೊಡನೆ/ವಯಸ್ಕರೊಡನೆ ಸಮಯ ಕಳೆಯಿರಿ. ಹತ್ತಿರದ ಪರಿಸರದಲ್ಲಿ ಇರುವ ದೇವಸ್ಥಾನಕ್ಕೂ ಒಂದು ಸುತ್ತು ಬಂದರೆ, ಮನಕೆ ಅಹ್ಲಾದ-ಸಮಾಧಾನ. ಮಕ್ಕಳು ಮೊಮ್ಮಕ್ಕಳು ಶಾಲೆ-ಕಚೇರಿಗೆ ಮನೆಯಿಂದ ತೆರಳಿದ ಅನಂತರ ನಿಮ್ಮಿಷ್ಟದ ಹಾಡು ಭಜನೆ ದೇವರನಾಮ ಹೇಳಿ-ಕೇಳಿ. ಒಂದೆರಡು ನಿಮಗಿಷ್ಟವಾಗುವ ಪುಸ್ತಕ, ದಿನಪತ್ರಿಕೆ ಓದುವ ಹವ್ಯಾಸ ಇರಲಿ. ನಿಮ್ಮ ಹೃದಯಕ್ಕೆ ಹತ್ತಿರವಾಗುವ ಕಿಶೋರ್ ಕುಮಾರನ, ವಿದ್ಯಾಭೂಷಣರ ಅಥವಾ ಎಸ್ಪಿಬಿಯವರ ಹಾಡುಗಳೂ ಆಗೀಗ ತುಟಿಯಂಚಲಿ ಗುನುಗುನಿಸಲಿ. ಈ ಎಲ್ಲದರ ನಡುವೆ ಬಟ್ಟೆ ಒಣ ಹಾಕುವುದು, ತರಕಾರಿ ದಿನಸಿ ತರುವುದು, ತಾರಸಿನ ಗಾರ್ಡನ್ ನಿರ್ವಹಣೆ ಇತ್ಯಾದಿ ಕೆಲಸಗಳನ್ನೂ ಆಸ್ಥೆ ಮತ್ತು ಪ್ರೀತಿಯಿಂದಲೇ ದಿನಾ ಮಾಡಿ... ದಿನಚರಿ ಹೀಗಿದ್ದಾಗ ನಾಲ್ಕು ಗೋಡೆಗಳ ನಡುವಿನ ಜೀವನ ಸುಂದರವಾಗಿಸಿಕೊಳ್ಳಬಹುದು. ನಿಮಗೆ ಬೇಕಾದಂತೆ ಬದುಕಿದ ಖುಷಿಯೂ ಉಚಿತವಾಗಿ ನಿಮ್ಮದಾಗುವುದರಲ್ಲಿ ಸಂಶಯವಿಲ್ಲ! ಸಣ್ಣ ಸಣ್ಣ ವಿಷಯಗಳಿಗೆ ಸಿಡಿಮಿಡಿ ಮಾಡಿಕೊಳ್ಳದೆ, ಮಕ್ಕಳ-ಮೊಮ್ಮಕ್ಕಳ ಬೇಕು ಬೇಡಗಳಿಗೆ ಪೂರಕವಾಗಿ ಸ್ಪಂದಿಸಿ-ಜೊತೆಯಾದರೆ ಮತ್ತು ಬಿಡುವಿನ ಸಮಯದಲ್ಲಿ ನಿಮಗಿಷ್ಟವಾದ ರೀತಿಯಲ್ಲಿ ಸಮಯವನ್ನು ವ್ಯಯಿಸಿದರೆ ನಗರ ಜೀವನವೂ ನಿಜಾರ್ಥದಲ್ಲಿ ಆನಂದಮಯ ಈ ಜಗಹೃದಯ!

ಅನ್ಯಾನ್ಯ ಕಾರಣಗಳಿಂದಾಗಿ ಕೆಲವು ವೃದ್ಧರು ವೃದ್ಧಾಶ್ರಮಗಳಲ್ಲಿ ಜೀವನ ಸವೆಸುತ್ತಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಅವರು ಒಬ್ಬಂಟಿ. ಗಂಡ ಯಾ ಹೆಂಡತಿ ಇಹಲೋಕ ತ್ಯಜಿಸಿದ ನೋವೂ ಸದಾ ಕಾಡುತ್ತಿರುತ್ತದೆ. ಅಂಥವರೂ ತಮ್ಮ ಪರಿಸ್ಥಿತಿಗೆ ಕೊರಗಿ ಖಿನ್ನರಾಗುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ. ಬದಲಾಗಿ ಇರುವ ಅವಕಾಶ, ಸಂದರ್ಭ, ಪರಿಸರದಲ್ಲಿ ನಿಮ್ಮಿಷ್ಟದ, ನಿಮ್ಮ ಮನಕೆ ಮುದ ನೀಡುವ, ನಿಮ್ಮ ಹೃದಯಕ್ಕೆ ಹತ್ತಿರವಾಗುವ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ವಾರ್ಧಕ್ಯವನ್ನು ನಿಮ್ಮ ಆತ್ಮಕ್ಕೆ ತೃಪ್ತಿ ಕೊಡುವ ರೀತಿ ಕ್ರಮಿಸಿ. ಯೋಗ, ಧ್ಯಾನ, ಪ್ರಾಣಾಯಾಮ ಇತ್ಯಾದಿಗಳು ತನು ಮತ್ತು ಮನವನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗಬಲ್ಲವು. ತೀರಿಕೊಂಡ ಗಂಡ/ಹೆಂಡತಿ ಅಥವಾ ಅಲ್ಲೆಲ್ಲೋ ದೂರದ ಊರುಗಳಲ್ಲಿ ಇರುವ ಮಕ್ಕಳು-ಮೊಮ್ಮಕ್ಕಳ ನೆನಪಾಗಿ ಆರ್ದ್ರತೆ ಆವರಿಸಿ ಅಳಬೇಕು ಅನ್ನಿಸಿದಾಗ ಭರಪೂರ ಅತ್ತು ಹಗುರವಾಗಿ. ಯಾವುದನ್ನೂ ಹೆಚ್ಚಾಗಿ ಮನದೊಳಗಿಟ್ಟು ಕೊರಗ ಬೇಡಿ. ನಾನು ಒಂಟಿ, ನನಗ್ಯಾರೂ ಹಿಂದೆಮುಂದೆ ಇಲ್ಲ ಎಂಬಿತ್ಯಾದಿ ಭಾವ-ಭಾವನೆ ಮನಸ್ಸಿನಿಂದ ತೊಡೆದುಹಾಕಿ. ಕಣ್ಣೀರು ಮನಕೆ ಸಮಾಧಾನ ಕೊಟ್ಟ ನಂತರ ವಾಸ್ತವತೆಯ ಅರಿವು ಮಾಡಿಕೊಂಡು ಬದುಕು ಕಟ್ಟಿ ಮುನ್ನಡೆಯಿರಿ. ನೀವಿರುವ ಪರಿಸರದ ಆಸುಪಾಸಿನವರನ್ನು ಪ್ರೀತಿಸಲು ಆರಂಭಿಸಿ. ಹಾಗಾದಾಗ ಬದುಕಲ್ಲಿ ಅಚಾನಕ್ ಆಗಿ 'ಪ್ರೇಮಲೋಕ' ಸೃಷ್ಟಿಯಾಗಿ ದಿನಗಳು ಸೋಜಿಗವೆನಿಸುವುದು ಸೂರ್ಯಚಂದ್ರರಷ್ಟೇ ಖರೆ! Give it a try.

ಇವೆಲ್ಲದರ ಹೊರತಾಗಿ, ಮುದಿತನದ ಜೊತೆಜೊತೆಗೆ ಮುಫ್ತಾಗಿ ಬಂದು ಅಂಟಿಕೊಳ್ಳುವ ವಯೋಸಹಜ ಕಾಯಿಲೆಗಳು ಮತ್ತು ಅವುಗಳ ಪರಿಣಾಮಗಳ ಬಗ್ಗೆ ದೈನಂದಿನ ನಿಗಾ ತಪ್ಪದೇ ಇರಲಿ. ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಢತೆ ವೃದ್ಧಾಪ್ಯವೆಂಬ ಮಜಲಿನಲ್ಲಿ ಸಮಾಧಾನ ಮತ್ತು ಸಮಚಿತ್ತದಿಂದಿರಲು ಬೇಕಾದ ಎರಡು ಸ್ಟ್ರಾಂಗ್ 'ಟಾನಿಕ್'ಗಳು! ಪ್ರಸ್ತುತ ಇರುವ ಆರೋಗ್ಯ ಮತ್ತು ಸಂಬಂಧಗಳನ್ನು ಪ್ರೀತಿ-ಜತನದಿಂದ ಕಾಪಾಡುವುದು ಎಲ್ಲ ವೃದ್ಧರ ಆದ್ಯ ಕರ್ತವ್ಯ ಮತ್ತು ಆದ್ಯತೆಯ ಜವಾಬ್ದಾರಿಯಾಗಿರಲಿ. ಹಾಗಾದಾಗ ಮಾತ್ರ ವೃದ್ಧಾಪ್ಯದ ಹಂತ ಮತ್ತೂ ಬದುಕಬೇಕೆನಿಸುವಷ್ಟು ಸುಂದರವಾದೀತು, ಇನ್ನೂ ಹಲವು ವರುಷ ಜೀವನವನ್ನು ಸವಿಯಬೇಕೆನಿಸುವಷ್ಟು ಸಿಹಿಯಾದೀತು! ದುಡ್ಡು, ದುಡಿತ, ಆಸ್ತಿ, ಅಂತಸ್ತು, ಸಂಸಾರ, ಸಂಬಂಧ... ಇತ್ಯಾದಿಗಳೆಲ್ಲ ಒಂದು ಹಂತದವರೆಗೆ ಸುಖ ಸಂತೋಷ ಸಮಾಧಾನ ನೀಡಿದರೆ; ಆತ್ಮಸ್ಥೈರ್ಯ, ತಾಳ್ಮೆ, ನಿರಂತರ ವ್ಯಾಯಾಮ, ಸ್ಥಿತಪ್ರಜ್ಞೆ, ಮಿತಭಾಷೆ ಮತ್ತು ಮಿತಾಹಾರ ವೃದ್ಧಾಪ್ಯದಲ್ಲಿ ಸಂತಸ ಸಂಭ್ರಮ ತರಬಲ್ಲ, ನಮಗೆ ನಾವೇ ಹುಡುಕಿಕೊಳ್ಳಬೇಕಾದ ಲೌಕಿಕ ಸಾಧನಗಳು! 'ನನ್ನಿಂದಾಗದು, ನನ್ನ ದೇಹದಲ್ಲಿ ಮೊದಲಿನಂತೆ ಶಕ್ತಿ ಇಲ್ಲ, ನನಗೆ ವಯಸ್ಸಾಗಿದೆ...' ಎಂದೆಲ್ಲಾ ಕೊರಗಿ ಚಿಂತಿಸುವುದಕ್ಕಿಂತ, 'ಹೌದು! ನನಗೆ ವಯಸ್ಸಾಗಿದೆ, ನನ್ನ ಬೇಕು ಬೇಡ ಗಳಿಗೆ ನಾನೇ ಅಧಿಪತಿ, ನನ್ನಿಷ್ಟದಂತೆ ಬದುಕಲು ನಾನು ಸಮರ್ಥನಾ(ಳಾ)ಗಿದ್ದೇನೆ, ಬದುಕಿನ ಉಳಿದ ಭಾಗವನ್ನು ಇನ್ನೂ ಸುಂದರವಾಗಿಸಬೇಕಿದೆ, ನನಗೆ ನಾನೇ ಬಾಸ್...' ಎಂದು ಅಂದುಕೊಳ್ಳುವ ವೃದ್ಧರು ನಿಜಕ್ಕೂ ಮತ್ತಷ್ಟು ವರ್ಷ ಖುಷಿಯಿಂದ ಬಾಳಬಲ್ಲರು ಮತ್ತು ತನ್ನ ಸಮಕಾಲೀನರಿಗೆ ಮಾದರಿಯೂ ಆಗಬಲ್ಲರು.

Dear energetic elders, ಅಂಥಾ ರೋಲ್ ಮಾಡೆಲ್ ನೀವೇ ಯಾಕಾಗಬಾರದು? Work and workout towards the same!

'ಹುಟ್ಟು ಸಾವು ಎರಡರ ನಡುವೆ ಮೂರು ದಿನದ ಬಾಳು...' ಎನ್ನುವುದು ಕವಿವಾಣಿ. 2+ ದಿನಗಳನ್ನು ಬದುಕಿನ ಅನಿವಾರ್ಯತೆಯಿಂದ, ನಿಮ್ಮ ಹತ್ತಿರದವರಿಗಾಗಿ, ಸರ್ವವನ್ನೂ ತ್ಯಾಗಮಾಡಿ ಬದುಕಿದ್ದೀರಿ. ಇನ್ನಿಂಗ್ಸಿನ ಕೊನೆಯ ಸ್ಲಾಗ್ ಓವರುಗಳಲ್ಲಿ ರನ್ ರೇಟ್ ಉತ್ತಮಪಡಿಸಿಕೊಳ್ಳಲು ಚೆನ್ನಾಗಿ ಆಡಬೇಕು. ನಮ್ಮ ಪಾಲಿನ ನಿಗದಿತ ಓವರುಗಳು ಮುಗಿಯುವುದರೊಳಗೆ ಒಂದೊಳ್ಳೆಯ ಮೊತ್ತ ಪೇರಿಸಬೇಕಿದೆ! ಆ ಮೊತ್ತವೇ ತೃಪ್ತಿ-ಆರೋಗ್ಯ-ಸಂತಸ-ಸಮಾಧಾನ-ನೆಮ್ಮದಿ. ವೃದ್ಧರೆಲ್ಲರೂ ಈ ಪ್ರಕಾರದಲ್ಲಿ ಯೋಚಿಸಿ ಕಾರ್ಯಪ್ರವೃತ್ತರಾದರೆ ಪ್ರತಿ ವೃದ್ಧ ಕುಟುಂಬವೂ ಆನಂದ ಸಾಗರವಾದೀತು, ಪ್ರತಿ ಸಂಸಾರವೂ ನಂದನವನವಾದೀತು, ಪ್ರತಿಯೊಂದು ಸಂಬಂಧವೂ ಪೂರ್ತಿ ತುಂಬಿರುವ ಜೇನಿನ ಗೂಡಾದೀತು! ಇದೆಲ್ಲದರ ಜೊತೆಯಲ್ಲಿ ವೃದ್ಧಾಶ್ರಮಗಳಿಗೂ, ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಹೊಸ ಬಿಸಿನೆಸ್ ಮಾಡೆಲ್ 'ಆಶ್ರಯ ಕೇಂದ್ರ'ಗಳಿಗೂ ಶಾಶ್ವತ ಬೀಗ ಜಡಿಯಬೇಕಾದೀತು! ಹಾಗಾಗಲಿ!

ಆಶಯ ಇಷ್ಟೇ - ಹಲ್ಲಿರದ ಮತ್ತು ಸುಕ್ಕು ಸುಕ್ಕಾದ ವೃದ್ಧರ ಮೊಗದಲ್ಲಿ ಸದಾ ನಗು ಮತ್ತು ದೃಷ್ಟಿ ಕ್ಷೀಣಿಸಿದ ಕಂಗಳಲ್ಲಿ ಬದುಕಿನ ಬಗ್ಗೆ ಇನ್ನೂ ಆಸಕ್ತಿ-ತುಡಿತ-ಹಂಬಲ ನೂರ್ಮಡಿಯಾಗಲಿ. 'ಸಾಯುವಷ್ಟು ದಿನ ಹೇಗೋ ಬದುಕಿದರೆ ಸಾಕು...' ಎಂದು ಯೋಚಿಸುವ ಬದಲು 'ಸಾವೂ ಹತ್ತಿರ ಸುಳಿಯಲು ಹಿಂಜರಿಯುವಂತೆ' ಲವಲವಿಕೆಯಿಂದ ಬದುಕಿ ತೋರಿಸಬೇಕಿದೆ. Your life; your own rules! God bless all. ಸರ್ವೇ ಭವಂತು ಸುಖಿನಃ; ಸರ್ವೇ ಸಂತು ನಿರಾಮಯಾ:!!

ರವೀ ಸಜಂಗದ್ದೆ

 
 
 

2 Comments


CHANDRAHASA K
CHANDRAHASA K
Mar 15, 2024

ಬರಹ ವಾಸ್ತವದ ಜತೆಗೆ ಯೋಚನೆಗಳ ಸಮಾಗಮದಂತಿದೆ. ಬದಲಾವಣೆಗಳು ಕಾಲನ ಓಟದ ಮೈಲುಗಲ್ಲುಗಳೆಂಬ ಭಾವ ಮೂಡಿ ಪ್ರಶ್ನೆಯ ಜತೆಯಲ್ಲೇ ಉತ್ತರವನ್ನೂ ನೀಡಿದೆ. ಶುಭಹಾರೈಕೆಗಳು.

Like

KS Bhat
KS Bhat
Feb 24, 2024

ವೃದ್ಧಾಪ್ಯದಲ್ಲಿ ಹೇಗೆ ಸಂತೋಷದಿಂದ ಬಾಳಬೇಕೆಂದು ಮನಮುಟ್ಟುವಂತೆ ತಿಳಿಸಿದ ನಿಮ್ಮ ಬರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ ರವಿ!!

ಕರಾಡ ವೆಬ್ಸೈಟ್ನಲ್ಲಿ ನಿಮ್ಮ ಇಂತಹ ಬರಹಗಳು ಆಗಾಗ ಬರುತ್ತಿರಲಿ.

😊

Like

Sincere Thanks to all the people who are directly or indirectly helped us to collect and consolidate the information

Subscribe Form

Thanks for submitting!

Thin Title

  • Blogger

©2021 by Karada Brahmana Samaja.

09980536158

bottom of page