ಭವಂತಡಿ - The Trekking Team
- 01
ಭವಂತಡಿಯ ಎರಡನೇ ಚಾರಣ-೧೭-ಮಾರ್ಚ್-೨೦೨೪ - ರೇವಣ ಸಿದ್ಧೇಶ್ವರ ಬೆಟ್ಟ
*ಶ್ರೀ ರೇವಣ್ಣ ಸಿದ್ದೇಶ್ವರ ಬೆಟ್ಟದ ಚಾರಣವೆಂಬ ಸಂಭ್ರಮ*:
ಚಾರಣವೆಂಬುವುದು ಸಂಚಾರಿಗಳಿಗೆ ಬರೀ ಮೋಜಿನ ಆಟವಲ್ಲ ಅದು ನಿಸರ್ಗದ ಮಡಿಲು ತೋರುವ ಪುಟ್ಟ ಸ್ವರ್ಗ. ಯಾಂತ್ರಿಕ ಜೀವನದಿಂದ ಬೇಸತ್ತ ಮನಗಳಿಗೆ ತಂಪೆರೆಯುವ ಅವಿಸ್ಮರಣೀಯ ಅನುಭವ. ಅದೊಂಥರಾ ರಿಫ್ರೆಶ್ಮೆಂಟ್...
ಭಾನುವಾರದ ಸುಂದರ ಮುಂಜಾನೆ ನಮ್ಮನ್ನು ಕೈ ಬೀಸಿ ಕರೆದದ್ದು ರಾಮನಗರದಲ್ಲಿರುವ ಶ್ರೀ ರೇವಣ ಸಿದ್ಧೇಶ್ವರ ಬೆಟ್ಟ.
ಬೆಂಗಳೂರಿನಿಂದ 60 ಕಿ. ಮೀ ದೂರವಿರುವ ಈ ಬೆಟ್ಟ ಏಕಶಿಲಾ ಅಧ್ಭುತವೇ ಸರಿ.
ಯುವ ಕರಾಡ ಸಮುದಾಯದ ಉತ್ಸಾಹಿ ಮನಸುಗಳ ಮುಂದಾಳತ್ವದಲ್ಲಿ ನಡೆಸಿದ ಈ ಚಾರಣ ಚಟುವಟಿಕೆಯನ್ನು *17 ಮಾರ್ಚ್ 2024* ರಂದು ಬೆಳಗ್ಗೆ *6.30* ರ ಸುಮಾರಿಗೆ ನಿರ್ದಿಷ್ಟ ಸ್ಥಳದಿಂದ ಶುರುಗೊಳಿಸಿದೆವು. ತದನಂತರ 8 ಗಂಟೆಗೆ ಸರಿಯಾಗಿ ಎಲ್ಲರೂ ಬೆಟ್ಟದ ಮುಂಬಾಗದಲ್ಲಿ ಹಾಜರಾದೆವು. ಹಸಿದ ಹೊಟ್ಟೆಗಳನ್ನು ಇಡ್ಲಿ ಮತ್ತು ಚಿತ್ರಾನ್ನದ ರುಚಿ ತಣಿಸಿತು. ಹರ ಹರ ಮಹಾದೇವ ಎಂಬ ಚೈತನ್ಯದಾಯಕ ಘೋಷಣೆಯೊಂದಿಗೆ ತಂಡವು ಚಾರಣದ ಸವಾರಿಯನ್ನು ಆರಂಭಿಸಿಯೇ ಬಿಟ್ಟಿತು. ಹಚ್ಚ ಹಸಿರಿನ ನಡುವಿನಲ್ಲಿರುವ ಈ ಬೆಟ್ಟ 360 ಮೆಟ್ಟಿಲುಗಳನ್ನೊಳಗೊಂಡಿದೆ. ಚಾರಣ ಆರಂಭಗೊಂಡು ಮೊದಲು ದೊರೆತಿದ್ದು ಭೀಮೇಶ್ವರ ದೇವಾಲಯದಲ್ಲಿರುವ ವೀರಭದ್ರ ಸ್ವಾಮಿ ಮಂದಿರ. ಇದರ ಐತಿಹ್ಯ ಕೂತುಹಲಕಾರಿ. ಜಗದ್ಗುರು ರೇವಣ್ಣ ಸಿದ್ದೇಶ್ವರರು ವೀರಶೈವ ತತ್ವೋಪದೇಶ ಮಾಡುತ್ತಾ, ಯಾರಿಗೂ ಕಾಣದಂಥ,ತಪಸ್ಸು ಮಾಡಲು ಯೋಗ್ಯವಾದ ಬೆಟ್ಟವನ್ನು ನೋಡಿ ಆರಿಸಿ ಬರುತ್ತೇನೆಂದು ಅಶ್ವವನ್ನೇರಿ ಹೊರಟರಂತೆ. ಆ ಕುದುರೆಯ ಹೆಜ್ಜೆಯ ಗುರುತು ಇಂದಿಗೂ ಇದೆ ಎಂದು ಹೇಳಲಾಗುತ್ತದೆ. ಅವರಂದು ಕುದುರೆಯೇರಿ ಯಾವ ಜಾಗದಲ್ಲಿ ಹೋದರೋ, ಅದೇ ಜಾಗದಲ್ಲಿ ಭಕ್ತರಿಂದು ಬೆಟ್ಟ ಹತ್ತಬೇಕು. ರೇವಣರು ಯಾರಿಗೂ ಕಾಣದಂತೆ 7೦೦ ವರ್ಷಗಳ ಕಾಲ ಆ ಜಾಗದಲ್ಲಿ ನೆಲೆಸಿದ್ದರಂತೆ. ಒಬ್ಬ ಬೇಟೆಗಾರನು ಉಡವನ್ನು ಬೇಟೆಯಾಡುತ್ತಾ ಹೋದಾಗ ಅದು ರೇವಣ್ಣರು ತಪಸ್ಸು ಮಾಡುತ್ತಿದ್ದ ಗುಹೆ ಹೊಕ್ಕಿತಂತೆ. ಇದರಿಂದ ತಪಸ್ಸಿಗೆ ಭಂಗಗೊಂಡ ರೇವಣರು, ತಾನಿಲ್ಲಿರುವುದು ಯಾರಿಗೂ ಹೇಳಬಾರದು, ತಪ್ಪಿ ಹೇಳಿದರೆ ನಿನ್ನ ತಲೆ ಸಹಸ್ರ ತುಂಡಾಗಲಿ ಎಂದು ಶಾಪವಿತ್ತರು. ಆದರೆ ಊರಿನವರಿಗೂ, ಹೆಂಡತಿಗೂ ಹೇಳಿದ್ದರಿಂದ ಅವನ ತಲೆ ಸಾವಿರ ತುಂಡಾಯಿತು ಎಂಬುದು ಪ್ರತೀತಿ. ಕೊನೆಗೆ ರೇವಣ್ಣ ಸಿದ್ಧೇಶ್ವರ ಅರ್ಧಾಂಶ, ಅರ್ಧ ಶಕ್ತಿ ಅಲ್ಲಿನ ಲಿಂಗದಲ್ಲಿ ಅಡಕವಾಗಿದೆ ಎನ್ನಲಾಗುತ್ತದೆ. ರೇಣುಕಾಂಬ ದೇವಸ್ಥಾನ, ಭೀಮೇಶ್ವರ ದೇವಾಲಯ, ರೇವಣ್ಣ ಸಿದ್ದೇಶ್ವರ ದೇವಾಲಯಗಳು ಈ ಬೆಟ್ಟದಲ್ಲಿರುವ ಭಕ್ತಿಕೇಂದ್ರಗಳು.
ಕಡಿದಾದ ಮೆಟ್ಟಿಲುಗಳನ್ನು ವಿವಿಧ ಘೋಷಣೆಗಳೊಂದಿಗೆ ನಿರಾಯಾಸವಾಗಿ ತಲುಪಿದ ಖುಷಿ, ಅಲ್ಲಿನ ರಮಣೀಯ ನೋಟ, ತಂಗಾಳಿ, ತುಂಟ ಮಂಗಗಳನ್ನು ನೋಡಿ ದುಪ್ಪಟ್ಟಾಯಿತು. *ಸತ್ಯನಾರಾಯಣ ಮವ್ವಾರು* ಇವರ ನೇತೃತ್ವದಲ್ಲಿ ನಡೆದ ಗುಂಪು ಚಟುವಟಿಕೆ, ವಿವಿಧ ಆಟಗಳು ಮನಸ್ಸಿಗೆ ಇನ್ನೂ ಮುದನೀಡಿದವು. ಇಂಥ ಚಟುವಟಿಕೆಗಳೇ ಸಮುದಾಯದ ಬಂಧವನ್ನು ಇನ್ನೂ ಬಲ ಗೊಳಿಸುವುದು. ವೀಡಿಯೋ, ಸೆಲ್ಫಿ, ಫೋಟೋಗಳ ನಡುವೆ ಸಮಯ ಸರಿದದ್ದೇ ತಿಳಿಯಲಿಲ್ಲ. ಅದರ ಜೊತೆಗೆ ಕುರುಕಲು ತಿಂಡಿಯ ಸಮಾರಾಧನೆಯೂ ನಡೆಯಿತು.
ಸುಮಾರು *10.30* ರ ಹೊತ್ತಿಗೆ, 3೦ ಜನರನ್ನೊಳ ಗೊಂಡ ನಮ್ಮ ತಂಡ ಭಾರವಾದ ಹೃದಯದೊಂದಿಗೆ ಮೆಟ್ಟಿಲುಗಳನ್ನಿಳಿಯಲು ಆರಂಭವಾಯಿತು. ಭಾನುವಾರದ ಸುಂದರ ಮುಂಜಾನೆಯು ಅಧ್ಭುತ ಚಾರಣದ ಅನುಭವಕ್ಕೆ ಸಾಕ್ಷಿಯಾಯಿತು.
*ಚಾರಣವನ್ನು ಆಯೋಜಿಸಿದ್ದ ಉತ್ಸಾಹಿ ಮನಸುಗಳಿಗೊಂದು ಹ್ಯಾಟ್ಸಾಫ್*...
_ *ಉಷಾ*. *ಉಪ್ಪಂಗಳ*
ಎರಡನೇ ಚಾರಣ ಬಂದೇ ಬಿಟ್ಟಿತು।
ಸೆಖೆಯ ಕಷ್ಟವ ಹಾಗೆಯೇ ಮರೆತು।।
ಶ್ರೀ ರೇವಣಸಿದ್ದೇಶ್ವರ ಬೆಟ್ಟದತ್ತ।
ಘೋಷಣೆ ಕೂಗು ನಮ್ಮ ನಾಲಗೆಯತ್ತ।।
ಕೂಗುತಲಿ ಹರ ಹರ ಮಹಾದೇವ।
ಮರೆತು ಹೋದೆವು ಬಿಸಿಲ ತಾಪವ।।
ಉತ್ಸಾಹದ ನಡಿಗೆಯಲಿ ಯುವ ಕರಾಡ।
ಹೊಸ ಮಾತುಗಳು ನಮ್ಮ ಸಂಗಡ।।
ಸಣ್ಣ ಚಾರಣದ ಮೋಜು ಮಸ್ತಿಯು।
ನೆನಪಿನ ಬುತ್ತಿ ಉಕ್ಕಿ ಹರಿಯೋ ಪರಿಯು।।
ಮೂರನೇ ಚಾರಣದಿ ಮತ್ತೆ ಸೇರೋಣ।
ನಮ್ಮವರ ಸಂಗಡ ಕರಾಡ ಯಾನ।।
ಹನಿकहानी
(ChitraSvasista)
Game
- 02
ಭವಂತಡಿ ತಂಡದ ಚೊಚ್ಚಲ ಚಾರಣ.
ಸುಮಾರು ೪೦ ಜನ ಉತ್ತರಿ ಬೆಟ್ಟ ಚಾರಣ ಮಾಡಲು ಉತ್ಸುಕರಾಗಿದ್ದೇವೆ. ಉತ್ತರಿ ಬೆಟ್ಟ ರಾತ್ರಿ ಚಾರಣ ತುಂಬಾ ಆನಂದದಾಯಕ ಮತ್ತು ಚಳಿಗಾಲದ ಆರಂಭದಲ್ಲಿ ಅತ್ಯಂತ ಉಲ್ಲಾಸಭರಿತ, ಶುಭ ಶುಭ್ರ ಮುಂಜಾನೆ ಸೂರ್ಯೋದಯ ವೀಕ್ಷಣೆಗೆ ಪ್ರಶಸ್ತ.
ಈ ನಿಟ್ಟಿನಲ್ಲಿ ರಾತ್ರಿ ಚಾರಣ ಅಂದರೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಗಳೂರಿಂದ ಹೊರಟು ಬೆಟ್ಟದ ಬುಡದಿಂದ 3.30 ರ ಸುಮಾರು ಬೆಟ್ಟ ಏರಲು ಪ್ರಾರಂಭಿಸಿದರೆ 5 ಗಂಟೆಗೆ ಅಥವಾ 5.30 ರ ಸುಮಾರು ಬೆಟ್ಟದ ಮೇಲೆ ಸೂರ್ಯೋದಯವನ್ನು ಆಸ್ವಾದಿಸಲು ಅಣಿಯಾಗಬಹುದು, ಇದು ಸೂಕ್ತ. ಬಲ್ಲ ಚಾರಣಿಗರ ಪ್ರಕಾರ ಇದು ರಾತ್ರಿ ಚಾರಣಕ್ಕೆ ಪ್ರಶಸ್ತ,
ಸುರಕ್ಷ, ಮತ್ತು ಪ್ರಸಿದ್ಧ. ಮನೆಯವರನ್ನು ಮಕ್ಕಳನ್ನು ಕರೆತನ್ನಿ, ನಮ್ಮ ಕರಾಡ ಸ್ನೇಹಿತರನ್ನು/ಬಂಧುಗಳನ್ನು ಸೇರಿಸಿ. ಅರಣ್ಯ ಇಲಾಖೆಯ ಅನುಮತಿ ಮತ್ತು ಮಾರ್ಗದರ್ಶಕರು ಬೇಕಾಗಿರುವುದರಿಂದ "ನಮ್ಮ ಟ್ರಿಪ್" ಎಂಬ ಚಾರಣ ಸಂಸ್ಥೆಯೊಂದಿಗೆ ಮಾತನಾಡಿದ್ದೇವೆ.
ಈ ಸಂಸ್ಥೆಯ ದರ ಪ್ರತಿ ಚಾರಣಿಗೆ ರೂ. 250/. ವೆಚ್ಚ ಕಡಿವಾಣ ಮತ್ತು ಯುವ ಕರಾಡ ಸಂಪರ್ಕ ಸೇತು ಬೆಳೆಯಲು ನಮ್ಮ ಸ್ವಂತ ವಾಹನದಲ್ಲಿ car pooling ಮಾಡೋಣ. ರಾತ್ರಿ ಚಾರಣ ಈ ಗುಂಪಿನ ಬಹಳ ಜನರ ಅಪೇಕ್ಷೆ ಕಾರಣ, ಎಲ್ಲರೂ ರಾತ್ರಿ ಚಾರಣ ಮಾಡೋಣ. ಸಂಪರ್ಕ ಸೇತು ಬೆಳೆಯಲಿ, ಚಾರಣ ಪ್ರಿಯರು ಸಮಾಜ ಸೇತು ಆಗಲಿ, ಯುವ ಪೀಳಿಗೆ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಮಾರ್ಗದರ್ಶನವಾಗಲಿ ಎಂಬುದೇ ತಂಡದ ಭವಂತಡಿ ಆಶಯ
ನಿದ್ರಾ ತ್ಯಾಗದ ನಮ್ಮ ಪಯಣ।
ಅರ್ಧ ದಿನದ ಸಣ್ಣ ಚಾರಣ।।
ಮುಂಜಾನೆ ಮೂರರ ಸುಸ್ತು ಮಾಯ।
ನಮ್ಮವರ ಮಾತುಗಳ ಜತೆ ಹೆಜ್ಜೆಯ।।
ಯುವ ಕರಾಡದಿ ಹೊಸ ಮುಖಗಳು।
ಪರಿಚಯಯಿಸಿತು ನಮ್ಮವರ ಸಾಲು।।
ಮತ್ತೆ ಬರಲಿ ದೊಡ್ದ ಚಾರಣದ ಕರೆಯು।
ಪಸರಿಸುತ ಕಬ್ರಾಸ ಹವ ಎಲ್ಲೆಡೆಯು।।
ಹನಿकहानी