top of page

ಕರಾಡ ಬ್ರಾಹ್ಮಣ ಸಮಾಜ 

kabrasa_media.jpg

ಪ್ರಸ್ತುತ ನಮ್ಮ ಕರಾಡ ಜನವರ್ಗ, ನಮ್ಮೂರ ಕರಾವಳಿಯ ಭೂ ಪ್ರದೇಶವನ್ನೂ ಮೀರಿ ನೆರೆಯ ರಾಜ್ಯಗಳಲ್ಲಿ, ದೇಶದ ಪ್ರಮುಖ ಪ್ರದೇಶಗಳಲ್ಲಿ, ಅಷ್ಟೇ ಏಕೆ ಜಗತ್ತಿನ ಪ್ರಮುಖ ನಗರಗಳಲ್ಲಿ ಪಸರಿಸಿದೆ. ಈ ವಿಚಾರ ನಮಗೆಲ್ಲ ಒಂದು ರೀತಿಯ ಹೆಮ್ಮೆಯ ಸಂಗತಿಯೇ ಸರಿ. ಎಲ್ಲರೂ ತಾವು ಕಲಿತ ವಿದ್ಯೆ, ಪಡೆದ ಅನುಭವಗಳನ್ನು ಬಳಸಿ ಆರ್ಥಿಕವಾಗಿ ಸಶಕ್ತರಾಗಿ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂಬ ತುಡಿತದಿಂದ ದೇಶ ವಿದೇಶಗಳ ಬೇರೆಬೇರೆ ಕಡೆಗಳಲ್ಲಿ ತಮ್ಮ ನೆಲೆ ಕಂಡುಕೊಂಡಿದ್ದಾರೆ. ಇದು ಉದ್ಯೋಗದ ಉದ್ದೇಶದಿಂದಿರಬಹುದು, ವಿದ್ಯಾರ್ಥಿಗಳಾಗಿ ಇರಬಹುದು ಅಥವಾ ಬದುಕಿನ ನಿವೃತ್ತಿಯ ಕ್ಷಣಗಳನ್ನು ಕಳೆಯುವುದಕ್ಕಿರಬಹುದು. ಏನಿದ್ದರೂ ನಮ್ಮವರೆಂದು ನಾವು ಹೆಮ್ಮೆಯಿಂದ ಹೇಳುವ ’ಕರಾಡ’ ಜನವರ್ಗ ಭೌಗೋಳಿಕವಾಗಿ ಅನೇಕ ಕಡೆ ಚದುರಿ ಹೋಗಿದೆ. ಹೀಗಿರುವಾಗ, ಎಲ್ಲರನ್ನೂ ಒಂದೇ ಸೂತ್ರದಲ್ಲಿ ಸೇರಿಸುವುದು ಈವತ್ತಿನ ಅಗತ್ಯಗಳಲ್ಲಿ ಮೊದಲನೆಯದು. ಅವರವರ ಅನುಕೂಲಕ್ಕೆ ತಕ್ಕಂತೆ ಅಗತ್ಯಕಂಡವರನ್ನು ಸಂಪರ್ಕಿಸುವ, ಕರಾಡ ಸಮುದಾಯದ  ಆಗುಹೋಗುಗಳನ್ನು ಸ್ಥೂಲವಾಗಿ ಪರಸ್ಪರ ಹಂಚುವ ಉದ್ದೇಶದಿಂದ ಕ್ರಿಯಾಶೀಲವಾದ ಜಾಲತಾಣವೊಂದರ ಅಗತ್ಯವಿದೆ ಎನ್ನುವುದು ಬಹು ಜನರ ಅಪೇಕ್ಷೆಯೂ ಕೂಡ. ಪ್ರಸ್ತುತ ಈ ಕೆಲಸವನ್ನು ಕರಾಡ ಬ್ರಾಹ್ಮಣ ಸಮಾಜ, ಬೆಂಗಳೂರು ಕೈಗೆತ್ತಿಕೊಂಡಿದೆ. ನಮ್ಮ ಸಮಾಜದ, ವಿವಿಧ ಕ್ಷೇತ್ರಗಳ ಅನೇಕ ಮಂದಿಯ ಸಹಭಾಗಿತ್ವದಿಂದ, ಪ್ರಸ್ತುತ ಇರುವ ಜಾಲತಾಣವನ್ನೇ ಮತ್ತಷ್ಟು ಓದುಗ ಸ್ನೇಹಿಯಾಗಿ ಮಾಹಿತಿಪೂರ್ಣ ವಿಚಾರಗಳ ಹಂಚಿಕಗೆ ನೆರವಾಗುವಂತೆ ಹೊಸ ತಂತ್ರಜ್ಞಾನದ ನೆರವಿನೊಂದಿಗೆ ತಮ್ಮೆದುರು ಪ್ರಸ್ತುತಪಡಿಸುತ್ತಿದ್ದೇವೆ.
ಊರ-ಪರವೂರ ಕರಾಡ ಬಾಂಧವರ ಪರಿಚಯವಿದ್ದರೂ ಸಂಪರ್ಕ ಸಾಧಿಸಲಾಗದೆ ಇದ್ದಾಗ, ಅಂಗೈಯಲ್ಲೇ ಅವರ ವಿಳಾಸ ಹಾಗೂ ಸಂಪರ್ಕ ಸಂಖ್ಯೆಯನ್ನು ಗೊತ್ತುಮಾಡುವ ಉದ್ದೇಶದಿಂದ ’ಕರಾಡ ವಿಳಾಸ ದರ್ಶಿನಿ’ ಯನ್ನು ಹಂತ ಹಂತವಾಗಿ ಈ ಜಾಲತಾಣದಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಇದು ನಾವು ಇಡಬಯಸುವ ಮಹತ್ವದ ಹೆಜ್ಜೆಗಳಲ್ಲೊಂದು.
ನಮ್ಮ ಕರಾಡ ಸಮುದಾಯ ಈಗ ವಿಶಾಲ ವೃಕ್ಷದಂತೆ ಬೆಳೆದು ನಿಂತಿದೆ. ಈ ಹಂತದಲ್ಲಿ, ನಮ್ಮ ಸಮುದಾಯದ ಹಿರಿಮೆ ಗರಿಮೆ ಹಾಗೂ ನಮ್ಮೊಂದಿಗೆ ಇದ್ದು ಮಹತ್ವದ ಸಾಧನೆ ಮಾಡಿದ ವ್ಯಕ್ತಿಗಳನ್ನು ಪರಸ್ಪರ ಗೊತ್ತು ಮಾಡುವುದು ಕೂಡಾ ಪ್ರಸ್ತುತ ಸನ್ನಿವೇಶದ ಅಗತ್ಯ. ಇದನ್ನು ಸುಲಲಿತಗೊಳಿಸಲು ವಿದ್ಯುನ್ಮಾನ ಯುಗ ನಮಗೆ ಅಪರಿಮಿತ ಅವಕಾಶಗಳನ್ನು ಮಾಡಿಕೊಟ್ಟಿದೆ. ಕೆಲವು ವರ್ಷಗಳ ಹಿಂದೆ ಇದ್ದ ’ಕಂಪ್ಯೂಟರ್’ ಕ್ರಾಂತಿಯನ್ನು ಹಿಂದಿಕ್ಕಿ ’ಮೊಬೈಲ್’ ಕ್ರಾಂತಿಯನ್ನು ಸಾಧಿಸಿದ ಇಂದಿನ ದಿನಗಳಲ್ಲಿ, ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಆಗು ಹೋಗುಗಳನ್ನು ನಮ್ಮ ಕರತಲದಲ್ಲೇ ನೋಡುವ, ಕೇಳುವ ಅವಕಾಶ ನಮ್ಮ ಬದುಕಿನ ಭಾಗವಾಗಿಬಿಟ್ಟಿದೆ. ಇಂತಹ ಸಂಕ್ರಮಣ ಕಾಲಘಟ್ಟದಲಲ್ಲಿ ದೇಶದ ಪ್ರಗತಿಗೆ ತಮ್ಮ ಬದುಕನ್ನು ಮುಡಿಪಾಗಿಟ್ಟ, ತಮ್ಮ ಏಳಿಗೆಯ ಜೊತೆ ಸಮಾಜದ ಏಳಿಗೆಯನ್ನೂ ಬಯಸಿದ ಅನೇಕ ಮಂದಿ ನಮ್ಮಲ್ಲಿದ್ದಾರೆ. ಅವರು ಕೇವಲ ಕರಾಡ ಸಮುದಾಯಕ್ಕಲ್ಲದೆ, ಇತರ ಜನ ವರ್ಗಕ್ಕೂ, ದೇಶವಾಸಿಗಳಿಗೂ ಮಾದರಿಯಾಗಿದ್ದಾರೆ, ಅನೇಕ ರೀತಿಯಲ್ಲಿ ಸಮಾಜೋಪಯೋಗಿ ಕೆಲಸ ಮಾಡಿ ಕೀರ್ತಿಗೆ ಭಾಜನರಾಗಿದ್ದಾರೆ. ಇದು ಪ್ರತ್ಯಕ್ಷವಾಗಿ ನಮ್ಮ ಕರಾಡ  ಸಮುದಾಯಕ್ಕೆ ಹಾಗೂ ಪರೋಕ್ಷವಾಗಿ ನಮ್ಮ ದೇಶಕ್ಕೆ ಹೆಮ್ಮೆ ತರುವ ಸಂಗತಿಯಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಂಥವರನ್ನು ಹಂತ ಹಂತವಾಗಿ ಪರಿಚಯಿಸುವ ಉದ್ದೇಶ ನಮ್ಮದು.
ಗತಿಸಿ ಹೋದ ಹಳೆಯ ತಲೆಮಾರು, ಪ್ರಸ್ತುತ ನಮ್ಮೊಂದಿಗಿರುವ ಹಿರಿಯ ತಲೆಮಾರು, ಯುವ ತಲೆಮಾರು, ಬಾಲ ಪ್ರತಿಭೆ - ಇವರೆಲ್ಲ ಒಟ್ಟಾರೆ ನಮ್ಮ ಸಮುದಾಯದ ಶಕ್ತಿ. ಅದು ನಮ್ಮವರ ಮುಂದೆ ಪ್ರಕಟವಾಗಬೇಕು ಮತ್ತು ಅವರ ಬದುಕು ನಮಗೆಲ್ಲ ಪ್ರೇರಣೆಯಾಗಬೇಕು ಎನ್ನುವುದು ನಮ್ಮ ಉದ್ದೇಶ.
ಪ್ರಸ್ತುತ ಈ ಅಂತರ್ಜಾಲ ಕರಾಡ ಬ್ರಾಹ್ಮಣರ ಅನೇಕ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಹಾಗೂ ನಮ್ಮ ಪಾರಂಪರಿಕ ಕಲೆಗಳನ್ನು ಜಗದಗಲದ ಓದುಗರಿಗೆ ಮಾಹಿತಿ ಪೂರ್ಣವಾಗಿ ತಲುಪಿಸುವ ಧ್ಯೇಯ ಹೊಂದಿದೆ. ನಮ್ಮ ದೇವಸ್ಥಾನಗಳು ನಮ್ಮ ಮೂಲ ನೆಲೆಯ ದ್ಯೋತಕಗಳು ಮಾತ್ರವಲ್ಲ, ನಮ್ಮ ಕಲೆ - ಸಂಸೃತಿಯ  ಕೇಂದ್ರಗಳೂ ಕೂಡ. ಪ್ರತಿ ದೇವಸ್ಥಾನಗಳ ಮಾಹಿತಿಯುಕ್ತ ಲೇಖನಗಳೊಡನೆ ಅಲ್ಲಿನ ಉತ್ಸವ, ಪರ್ವ ಕಾಲಗಳಲ್ಲಿ ನಡೆಯುವ ಕಾರ್ಯಕ್ರಮ ವಿವರಗಳನ್ನು ಸಕಾಲಿಕವಾಗಿ ಪ್ರಕಟಿಸುವ ಉದ್ದೇಶವ ನಮ್ಮ ಮುಂದಿದೆ. ಇದರೊಡನೆ, ಕಾರ್ಯಕ್ರಮಗಳ ಮತ್ತು ವಿವಿಧ ಘಟನಾವಳಿಗಳ ಛಾಯಾಚಿತ್ರ ಹಾಗೂ ವಿಡಿಯೋಗಳನ್ನೂ ಕೂಡ ಸಕಾಲದಲ್ಲಿ ಒದಗಿಸುವ ಗುರಿ ಇದೆ.
ಸಾಧನೆಯ ಕ್ಷೇತ್ರ ಯಾವುದೇ ಇರಬಹುದು, ಆಯಾ ಕ್ಷೇತ್ರದಲ್ಲಿ ಮಹತ್ವಪೂರ್ಣ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಬರೆದ ಲೇಖನಗಳು, ಬದುಕಿನ ಸಂಕಷ್ಟಗಳನ್ನು ಮೆಟ್ಟಿ ನಿಂತು ಔನ್ನತ್ಯಕ್ಕೇರಿದ ವ್ಯಕ್ತಿಗಳ ಸಂದರ್ಶನ, ನಮ್ಮ ಅನೇಕ ಲೇಖಕರು ಬರೆದ ಪುಸ್ತಕಗಳ ಮಹತ್ವದ ಮಾಹಿತಿ -ಇತ್ಯಾದಿಗಳು ಮುಂದೆ ಓದುಗರಿಗೆ ಈ ಜಾಲತಾಣದಲ್ಲಿ ಲಭ್ಯವಾಗಲಿವೆ.
ಇಂದು ನಮ್ಮವರು ಸಾಮಾಜಿಕವಾಗಿ ಮುಂಚೂಣಿಯಲ್ಲಿ ನಿಲ್ಲುವುದರ ಜತೆ ವ್ಯವಹಾರ - ವೃತ್ತಿಗಳಲ್ಲೂ ಮಹತ್ವದ್ದನ್ನು ಸಾಧಿಸಿ ತೋರಿದ್ದಾರೆ. ಸಮಾಜಮುಖಿಯಾಗಿ ನಿಂತ ವೈದ್ಯರನ್ನು, ವಕೀಲರನ್ನು, ಶಿಕ್ಷಕರನ್ನು, ತಂತ್ರಜ್ಞರನ್ನು, ಸಂಗೀತಜ್ಞರನ್ನು, ವೈದಿಕ ಪರಂಪರೆಯ ಮಂದಿಯನ್ನು ಪರಿಚಯಿಸುವ ಪ್ರಯತ್ನವೂ ನಮ್ಮ ಪಟ್ಟಿಯಲ್ಲಿದೆ. ಇದರೊಡನೆ ತೆರೆಮರೆಯ ಸಾಧಕರನ್ನು ಮುನ್ನೆಲೆಗೆ ತಂದು ನಮ್ಮವರಿಗೆ ಪರಿಚಯಿಸುವ ಕೆಲಸವೂ ನಮ್ಮದಾಗಬೇಕು. ಈ ಪರಿಚಯಾತ್ಮಕ ಮಾಹಿತಿಯಲ್ಲದೆ, ನಮ್ಮ ಸಂಪ್ರದಾಯದ ಹಳೆಯ ಗಾಂದ್ರಗಳನ್ನು ಅಕ್ಷರ ರೂಪದಲ್ಲಿ ಪ್ರಕಟಿಸುವುದು ಮತ್ತು ಅವನ್ನು ಹಾಡಿ ತನ್ಮೂಲಕ ನಮ್ಮವರಲ್ಲಿ ನಮ್ಮ ಪರಂಪರೆಯ ಬಗೆಗೆ ಇನ್ನಷ್ಟು ಶ್ರದ್ಧೆ ಮೂಡಿಸುವ ಪ್ರಯತ್ನವನ್ನು ಈ ಮಾಧ್ಯಮದ ಮೂಲಕ ಮಾಡಲಿದ್ದೇವೆ.

ಕರಾಡ ಸಮುದಾಯದ ಅನೇಕ ಮಂದಿ ತಮ್ಮದೇ ಆದ ವಿವಿಧ ವ್ಯವಹಾರಗಳನ್ನು ನಡೆಸುತ್ತಿದ್ದು ಆ ಕ್ಷೇತ್ರದಲ್ಲೇ ಮುಂದುವರಿಯುವ ಉದ್ದೇಶವನ್ನು ಹೊಂದಿದ್ದಾರೆ. ಈ ಸಂದರ್ಭದಲ್ಲಿ, ತಮ್ಮ ವಾಣಿಜ್ಯ ವ್ಯವಹಾರದ ಜಾಹೀರಾತುಗಳನ್ನು ಈ ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟಿಸಲು ಅವಕಾಶವಿದೆ. ಇದು ನಮಗೂ ಆರ್ಥಿಕವಾಗಿ ನೆರವಾಗಲಿದೆ ಹಾಗೂ ತಮ್ಮ ವ್ಯವಹಾರದ ಹೆಚ್ಚಿನ ವಿಸ್ತರಣೆಗೂ ನೆರವಾಗಲಿದೆ. ಈ ಅಂತರ್ಜಾಲದ ಒಟ್ಟಾರೆ ಪ್ರಕಟಣೆಯನ್ನು ಮುಂದಿನ ಕೆಲವು ತಿಂಗಳಲ್ಲಿ ಹಂತ ಹಂತವಾಗಿ ಮಾಡಲಾಗುವುದು. ಮಾಹಿತಿಪೂರ್ಣ ವಿಚಾರಗಳನ್ನು ಆದ್ಯತೆಯ ಮೇಲೆ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು. ತಮ್ಮ ಸಮಯೋಚಿತ ಸಲಹೆ-ಸೂಚನೆ-ಅಭಿಪ್ರಾಯಗಳಿಗೆ ಸದಾ ಸ್ವಾಗತ. ಇದಕ್ಕಾಗಿ ತಮ್ಮ ಸದಭಿಪ್ರಾಯಗಳನ್ನು ನಮ್ಮ ಸಂಪಾದಕ ಮಂಡಳಿಯ ಈ ಮೈಲ್ ವಿಳಾಸಕ್ಕೆ ಪ್ರತ್ಯೇಕವಾಗಿ ಕಳುಹಿಸಬಹುದು. ತಮ್ಮ ಅಭಿಪ್ರಾಯಗಳಿಗೆ ಸಂಬಂಧಿಸಿ, ಮಾಹಿತಿ ಸಮಂಜಸವೆಂದು ಕಂಡುಬಂದರೆ, ಸಂಪಾದಕ ಮಂಡಳಿ ಅಂತಹ ಸೂಚನೆಗಳನ್ನು ಖಂಡಿತಾ ಸ್ವಾಗತಿಸುತ್ತದೆ.
ಬನ್ನಿ, ನಮ್ಮೊಂದಿಗೆ ಕೈಜೋಡಿಸಿ. ತನ್ಮೂಲಕ ಕರಾಡ ಬ್ರಾಹ್ಮಣ ಸಮುದಾಯದ ಅಸ್ತಿತ್ವವನ್ನು ಜಗತ್ತಿನ ಮುಂದೆ ತೆರೆದಿಡೋಣ. ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಹಿಂದಿನ ತಲೆಮಾರಿನ ಗಟ್ಟಿತನವನ್ನೂ ಸತ್ವಪೂರ್ಣ ಜ್ಞಾನ ಭಂಡಾರವನ್ನೂ ವಿಶ್ವ ವೇದಿಕೆಯಲ್ಲಿ ಹಂಚಲು ಅಣಿಯಾಗೋಣ. ಹೊಸ ತಲೆಮಾರಿನ ಆಶೋತ್ತರಗಳಿಗೆ ಸ್ಪಂದಿಸೋಣ. ತನ್ಮೂಲಕ ಈ ಕರಾಡ ಜಾಲತಾಣವನ್ನು ವಿಶ್ವನ್ನೇ ಬಂಧಿಸುವ ಜಾಲತಾಣವನ್ನಾಗಿ ರೂಪಿಸೋಣ.

No events at the moment
bottom of page