Social Help Groups of Karada Samaja
- 01
ಮಾಧವ ಭಟ್ಟ, ಬಳ್ಳಪದವು , ವಿದ್ವಾನ್ - ಶಿರೋಮಣಿ
ಅಗಲ್ಪಾಡಿ ಮಠ ಎಂಬ ಅಭಿಧಾನದಿಂದ ಮುಖ್ಯವಾಗಿ ಇಂದು ಶ್ರೀದುರ್ಗಾಪರಮೇಶ್ವರೀ ದೇವಾಲಯವು ಕಂಗೊಳಿಸುತ್ತದೆ. ಪುರಾತನ ಕಾಲದಿ೦ದಲೂ ಇಲ್ಲಿ ಧಾರಾಳವಾಗಿ ಅನ್ನದಾನವು ನಡೆಯುವುದರಿಂದಲಾಗಿ ಅನ್ನಪೂರ್ಣೇಶ್ವರೀ ದೇವಸ್ಥಾನವೆಂದೂ ಇದು ಪ್ರಸಿದ್ಧವಾಗಿದೆ. ಇದು ಕಾಸರಗೋಡು ಪ್ರಾಂತದ ಉಬರಂಗಳ ಗ್ರಾಮದಲ್ಲಿ ಅಂದರೆ ಈಗಿನ ಕುಂಬ್ಡಾಜೆ ಗ್ರಾಮದಲ್ಲಿದೆ. ಬಹಳ ಹಿಂದಿನಿಂದ ಗ್ರಾಮಾಧಿಕಾರಿಗಳಾಗಿ, ಗ್ರಾಮಸ್ಥರಾಗಿ ರಾಜ ವೈಭವದಿಂದ ಮೆರೆದ ಪಾರಗದ್ದೆ -ಶ್ರೀ ಕುಣಿಕುಳ್ಳಾಯರ ಕುಟುಂಬದ ಸ್ಥಳ ಇದು.
ಸುಮಾರು 500-600 ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ವಲಸೆ ಬಂದ ಕರಾಡ ಬ್ರಾಹ್ಮಣರು ತಮ್ಮ ಆರಾಧ್ಯ ದೈವವಾದ ಶ್ರೀದುರ್ಗಾಪರಮೇಶ್ವರೀದೇವಿಯನ್ನು ಉಬರಂಗಳ ಶ್ರೀಯುತ ಕುಣಿಕುಳ್ಳಾಯರ ಅಧೀನದಲ್ಲಿರುವ ಅಗಲ್ಪಾಡಿ ಎಂಬ ಸ್ಥಳದಲ್ಲಿ ಅವರ ಅನುಮತಿ ಮೇರೆಗೆ ಪ್ರತಿಷ್ಠಾಪಿಸಿ ಆರಾಧಿಸಿದರೆಂದು ಹಿರಿಯರ ಹೇಳಿಕೆ. ಇದೇ ಸ್ಥಳದಲ್ಲಿ ಕುಣಿಕುಳ್ಳಾಯರು ಧರ್ಮಶಾಲೆಯೊಂದನ್ನು ನಡೆಸುತ್ತಿದ್ದರಂತೆ. ಆಮೇಲೆ ಶ್ರೀಯುತ ಕುಣಿಕುಳ್ಳಾಯರ ಕುಟುಂಬದ ಹಿರಿಯರು ದೇವಸ್ಥಾನಕ್ಕೆ ಬೇಕಾದಷ್ಟು ಸ್ಥಳವನ್ನು ಉದಾರವಾಗಿ ದಾನ ಕೊಟ್ಟಿರುತ್ತಾರೆ. ಆ ಸ್ಮರಣೆಗಾಗಿ ಇಲ್ಲಿನ ಉತ್ಸವಾದಿ ವಿಶೇಷ ಸಂದರ್ಭಗಳಲ್ಲಿ ಇಂದಿಗೂ ಅವರಿಗೆ ಪ್ರಪ್ರಥಮವಾಗಿ ಪ್ರಸಾದ ಸಲ್ಲುವುದು ವಾಡಿಕೆ. ಅಲ್ಲದೆ ಅವರ ಉಪಸ್ಥಿತಿಯಲ್ಲಿಯೇ ವಿಶೇಷ ಕಾರ್ಯಕ್ರಮಗಳು ನಡೆಯಬೇಕು.
ವಿದ್ವದ್ವರೇಣ್ಯರಾಗಿದ್ದ ಖಂಡೇರಿ ಅನಂತ ಶಾಸ್ತ್ರಿಗಳಿಂದ ರಚಿತವಾದ "ಅಗಲ್ಪಾಡಿ ಮಹಾತ್ಮೆ” ಎಂಬ ಪುಸ್ತಕದಲ್ಲಿರುವಂತೆ, ಕರಾಡದ ತಪಸ್ವೀ ಬ್ರಾಹ್ಮಣೋತ್ತಮರೊಬ್ಬರು ಕೆಲವು ಕಾಲ ಕಾಶಿಯಲ್ಲಿದ್ದು "ಅನ್ನಪೂರ್ಣೇಶ್ವರೀ ವಿಶ್ವನಾಥ" ರನ್ನಾರಾಧಿಸಿ ತಮ್ಮವರನ್ನರಸುತ್ತಾ ಈ ಕಡೆ ಬರುವಾಗ ಜತೆಯಲ್ಲಿರುವ ಆರಾಧನಾಮೂರ್ತಿ ದೇವೀ ಸಾನ್ನಿಧ್ಯವನ್ನು ಇದೇ ಸ್ಥಳದಲ್ಲಿ ಪ್ರತಿಷ್ಠಾಪಿಸಿದರೆಂದು ತಿಳಿದುಬರುತ್ತದೆ. 1954ರಲ್ಲಿ ಶ್ರೀಶೃಂಗೇರಿ ಶಾರದಾ ಪೀಠಾಧಿಪತಿಗಳಾದ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರು ಪ್ರಪ್ರಥಮವಾಗಿ ಆಗಲ್ವಾಡಿ ಮಠಕ್ಕೆ ಚಿತ್ತೈಸಿದಾಗ ದೇವಿಯನ್ನಾರಾಧಿಸಿ ಹೊರ ಬಂದು ಇಲ್ಲಿ ಕಾಶೀ ಅನ್ನಪೂರ್ಣೇಶ್ವರೀ ಸಾನ್ನಿಧ್ಯವಿದೆಯೆಂದು ಅಪ್ಪಣೆ ಕೊಡಿಸಿರುತ್ತಾರೆ.
ಇಲ್ಲಿ ದೇವೀ ಸಾನ್ನಿಧ್ಯವು ಪ್ರಾರಂಭದ ಹಂತದಲ್ಲಿ "ಶಕ್ತಿ" ಎಂಬ ಸಣ್ಣ ಗೇಣುದ್ದದ ಆಯುಧದಲ್ಲಿದ್ದಿತೆಂದೂ, ಬಿಂಬಾದಿ ಪ್ರತಿಷ್ಟೆಯು ಆಮೇಲೆ ನಡೆಯಿತೆಂದೂ ಐತಿಹ್ಯವಿದೆ. ಇಂದಿಗೂ ಬಿಂಬದೊಡನೆ ಈ ಆಯುಧ ಇರುವುದನ್ನು ನೋಡಬಹುದು.
ಹಿಂದೊಮ್ಮೆ ಮಾಯಿಪ್ಪಾಡಿಯ ಅರಸರು ಈ ದಾರಿಯಲ್ಲಿ ಬಂದಾಗ ಇಲ್ಲಿನ ಅನ್ನದಾನಾದಿ ವೈಭವವನ್ನು ಕಂಡು, ಇದು ದೈವೀಶಕ್ತಿಯ ಪ್ರಭಾವವೆಂದು ಮನವರಿತು ಶಕ್ತ್ಯಾಯುಧವನ್ನು ಕೊಂಡು ಹೋಗಿ ಆರಾಧಿಸಿದರೆಂದೂ, ಕೂಡಲೇ ವಿಪತ್ತು ಒದಗಿ ಪುನಃ ಅಗಲ್ಪಾಡಿಗೆ ತಂದೊಪ್ಪಿಸಿದರೆಂದೂ, ಆ ಬಗ್ಗೆ ಈಗಲೂ ಅಲ್ಲಿನ ಅರಮನೆಯಲ್ಲಿ ದೇವೀಪೂಜೆ ನವರಾತ್ರಿ ಇತ್ಯಾದಿಗಳು ನಡೆಯುತ್ತಲಿವೆಯೆ೦ದೂ ಸ್ಥಳ ಪುರಾಣದಲ್ಲಿ ಹೇಳಿದೆ. ಈ ಕಾರಣದಿಂದಲಾಗಿ ಆ ಸ್ಥಳಕ್ಕೆ "ಮಾಯಾಪಾಡಿ" ಎಂಬ ಹೆಸರು ಬಂದಿದ ಎಂತಲೂ ಹೇಳುತ್ತಾರೆ.
ಪ್ರಕೃತ ಈ ಕಾಸರಗೋಡು ಪ್ರದೇಶದಲ್ಲಿ ಕರಾಡ ಬ್ರಾಹ್ಮಣ ಸಮಾಜದವರು ನಾಲ್ಕು ಐದು ಊರುಗಳಲ್ಲಿ ನೆಲೆಗೊಂಡಿದ್ದಾರೆ. ಸಮಾಜದ ಆಚಾರ ವಿಚಾರಗಳ ಮೇಲ್ವಿಚಾರಕರಾಗಿ - ಉಪ್ಪಂಗಳ, ನೂಜಿ, ತೈರೆ, ಚೇರ್ಕುಡ್ಲು ಎಂಬ 4 ಮನೆತನದವರು ಪರಂಪರೆಯ ಜಾತಿ ಮೊತ್ತೇಸರರಾಗಿ ನಿಯಮಿತರಾಗಿದ್ದಾರೆ. ಅಲ್ಲದೆ ವಿಶೇಷವಾಗಿ ಅಗಲ್ಪಾಡಿ ಮಠದ ಬಗ್ಗೆ ನಿತ್ಯ ನೈಮಿತ್ತಿಕಾದಿ ಕಾರ್ಯನಿರ್ವಹಣೆಗಾಗಿ - ಉಪ್ಪಂಗಳ, ಪೆರಂಜೆ, ಕೋಳಿಕ್ಕಜೆ, ಚಾಂಗುಳಿ, ಬೇಂದ್ರೋಡು, ಎಂಬ 5 ಕುಟುಂಬದವರು ಮೊಕ್ತೇಸರರಾಗಿಯೂ ನಿಯಮಿತರಾಗಿರುತ್ತಾರೆ. 40 ಮನೆತನ (ಒಕ್ಕಲುಗಳು) ನಿತ್ಯನೈಮಿತ್ತಿಕ ನೈವೇದ್ಯ ದೀಪಾದಿಗಳಿಗೆ ಬೇಕಾದ ಸಾಧನಗಳನ್ನು ಪೂರೈಸುವ ಬಗ್ಗೆಯೂ ನಿಯಮಿತರಾಗಿದ್ದಾರೆ. ಪೂರ್ವಶರ್ತ ಪ್ರಕಾರ ಇವರೆಲ್ಲರೂ ಸಲ್ಲಿಸಬೇಕಾದ ವಸ್ತುಗಳನ್ನು ಆಯಾಯ ಕಾಲಕ್ಕೆ ಸರಿಯಾಗಿ ದೇವಸ್ಥಾನಕ್ಕೆ ತಲಪಿಸಬೇಕಾಗಿದೆ. ಮೊದಲು ಸಣ್ಣದಾಗಿದ್ದ ಸಮಾಜವು ಈಗ ವಿಸ್ತಾರಗೊಂಡಿದೆ.
ಹಿಂದೊಮ್ಮೆ ದಾನವಾಗಿ ಬಂದ "ಮಜಕ್ಕಾರು" ಎಂಬ ಆಸ್ತಿಯಿಂದ ಬಹು ಕಾಲ ಅಕ್ಕಿ, ಅಡಿಗೆ, ತೆಂಗಿನಕಾಯಿ, ಹಸುರುವಾಣಿ ಇತ್ಯಾದಿ ಧಾರಾಳವಾಗಿ ಗೇಣಿ ಬರುವುದಿತ್ತು. ಧರ್ಮವೂ ನಿರಾತಂಕವಾಗಿ ನಡೆಯುತ್ತಿತ್ತು. ಈಗಿನ ಒಕ್ಕಲು ಮಸೂದೆಯಿಂದಾಗಿ ಇದು ಕುಂಠಿತವಾಗಿದೆ. ಆದರೂ ಭಕ್ತರ ನೆರವಿನಿಂದ ಪೂರ್ವ ರಿವಾಜಿನಂತೆ ನಿಯಮ ಪ್ರಕಾರ ನಿತ್ಯ ಕಾರ್ಯಕ್ರಮಗಳು ನಡೆಯುತ್ತಲಿವೆ.
ಅಗಲ್ಪಾಡಿ ಮಠವೇ ಕರಾಡ ಬ್ರಾಹ್ಮಣ ಸಮುದಾಯದ ಪ್ರಧಾನ ಆರಾಧನಾ ಕೇಂದ್ರ. ಇಲ್ಲಿ ಪ್ರತಿದಿನವೂ ಉಷಃ ಕಾಲದಲ್ಲಿಗಣಪತಿ ಹೋಮ, ಪಂಚಾಮೃತ ರುದ್ರಾಭಿಷೇಕ ಪೂರ್ವಕ ಬೆಳಗ್ಗಿನ ಪೂಜೆ ನಡೆಯುತ್ತದೆ. ಹಾಲು ಪಾಯಸ, ಮಹಾ ನೈವೇದ್ಯ ಸಮರ್ಪಣೆಯೊಂದಿಗೆ ಮಧ್ಯಾಹ್ನ ಪೂಜೆ , ಸಂಧ್ಯಾಕಾಲದ ದೀಪಾರಾಧನೆಯೊಂದಿಗೆ ರಾತ್ರಿ ಪೂಜೆಗಳು ನಿರ೦ತರವಾಗಿ ವಿಧ್ಯುಕ್ತವಾಗಿ ನಡೆದು ಬರುತ್ತಲಿವೆ. ತ್ರಿಕಾಲಗಳಲ್ಲಿಯೂ ನೈವೇದ್ಯ ಸಮರ್ಪಣೆಯಲ್ಲದೆ ಭಕ್ತಾದಿಗಳಿಂದ ಕುಂಕುಮಾರ್ಚನೆ, ಪಾಯಸ ನೈವೇದ್ಯ, ಹಣ್ಣುಕಾಯಿ ಮೊದಲಾದ ಸೇವೆಗಳು ಧಾರಾಳವಾಗಿ ನಡೆಯುತ್ತವೆ. ತುಪ್ಪ ಮತ್ತು ಎಣ್ಣೆಯಿಂದ ಸುಮಾರು 21 ನಂದಾ ದೀಪಗಳು ಪ್ರಜ್ವಲಿಸುತ್ತವೆ. ಬರುವ ಭಕ್ತಾದಿಗಳಿಗೂ ಸಮೀಪದ ಶಾಲಾ ಮಕ್ಕಳಿಗೂ
ಮಧ್ಯಾಹ್ನ ಪ್ರಸಾದ ಭೋಜನ ವ್ಯವಸ್ಥೆಯಿದೆ. ವರ್ಷ ಪ್ರತಿ, ಸೌರಮಾನದ ಸಂಕ್ರಮಣ ಕಳೆದ ಪ್ರಥಮ ಮಂಗಳವಾರ ನವಕಾಭಿಷೇಕ ಪೂರ್ವಕ ವಿಶೇಷ ಪೂಜೆಯಿದೆ. ವಿಷುಕಣಿ ಮೊದಲಾದ ಪಂಚಪರ್ವಗಳು ನವರಾತ್ರೆ, ಮಾಘಮಾಸದ ಪಂಚಮಿಯಿಂದ ಧ್ವಜಾರೋಹಣವಾಗಿ 5 ದಿನ ಮಹೋತ್ಸವ ರಥೋತ್ಸವ, ಜಟಾಧಾರಿಮಹಿಮೆ, ಕಾರ್ತಿಕ ಹುಣ್ಣಿಮೆಗೆ ಚಂಡಿಕಾಹೋಮ, ಕನಕಾಭಿಷೇಕ ಪುರಃ ಸರಪೂಜೆ, ವೃಷಭಮಾಸದ 17 ರಂದು ಕಳಭಾಭಿಷೇಕ ಪೂರ್ವಕ ಪ್ರತಿಷ್ಠಾದಿನಾಚರಣೆ, ಈ ಎಲ್ಲಾ ವಿಶೇಷದಿನಗಳಲ್ಲಿ ಮಹಾಸಂತರ್ಪಣೆ ಸಹ ನಡೆದುಬರುತ್ತಿದೆ. ಈ ಸಂದರ್ಭಗಳಲ್ಲಿ ಎಲ್ಲಾ ಸಮಾಜ ಬಾಂಧವರೂ ಸೇರುತ್ತಾರೆ.
ಇಲ್ಲಿ ವೇದಾಧ್ಯಾಪನ, ವೇದಪಾರಾಯಣಗಳು ಹಿಂದಿನಿಂದಲೂ ನಡೆದು ಬರುವುದರಿಂದ ಅಗಲ್ಪಾಡಿ ಮಠವೆಂದೇ ಪ್ರಸಿದ್ಧವಾಗಿದೆ. ಮಠ ಸಂಪ್ರದಾಯದಂತೆ ಊರವರು ಸೇರಿ ಉಪಾ ಕರ್ಮಾದಿಗಳನ್ನೂ ನಡೆಸುತ್ತಾರೆ. ವಾರ್ಷಿಕವಾಗಿ ಕೆಲವು ಮನೆತನಗಳಿಂದ ಸಮಾರಾಧನೆ ದೀಪಾರಾಧನೆಗಳು ಪರಂಪರಾಪ್ರಾಪ್ತವಾಗಿ ನಡೆದುಬರುತ್ತವೆ. ಹರಕೆಯಾಗಿಯೂ ಇವುಗಳು ನಡೆದು ಬರುವುದುಂಟು.
ಇದಲ್ಲದೆ-ತೈರೆ- ಆವಳ-ಕೊಂಗೂರು ಎಂಬ 3 ಮಠಗಳು ಈ ಪಂಗಡಕ್ಕೆ ಸೇರಿದ್ದಾಗಿವೆ. ಎಲ್ಲಾ ಕಡೆಯೂ ದೇವಿಯೇ ಆರಾಧ್ಯದೇವತೆ. ಈ ಪೈಕಿ ಕೊಂಗೂರು ಮಠವು ಮಂಗಳೂರಲ್ಲಿದೆ.
ಆಯಾಯ ಸ್ಥಳಾಧಿಕಾರಿಗಳು ಆಯಾಯ ಮಠದ ಭಾರವಾಹಿಗಳಾಗಿದ್ದು ನಿತ್ಯ ನೈಮಿತ್ತಕಾದಿಗಳನ್ನು ನಡೆಸಿಕೊಂಡು ಬರುತ್ತಾರೆ. ಪ್ರಾಯಶಃ ಎಲ್ಲಾ ಕಡೆಗಳಲ್ಲೂ ಒಂದೇ ರೀತಿಯ ಪೂಜಾ ಪದ್ಧತಿಗಳಾಗಿವೆ. ಅಗಲ್ಪಾಡಿ ಮತ್ತು ತೈರೆಯಲ್ಲಿ ಧ್ವಜ ಪ್ರತಿಷ್ಠೆಯಾದುದರಿಂದ 5 ದಿನಗಳ ವಾರ್ಷಿಕೋತ್ಸವವು ಕೆಲವು ವರ್ಷಗಳಿಂದ ನಡೆದು ಬರುತ್ತದೆ. ಮಲ್ಲವೂ ಅಗಲ್ಪಾಡಿಗೆ ಸೇರಿದ್ದಾಗಿದೆ ಎಂದು ಕೆಲವರು ಹೇಳುತ್ತಾರೆ. ಅಲ್ಲಿಯ ಕ್ರಮಗಳೂ ಇಲ್ಲಿನಂತೆಯೇ ಇವೆ.
ಅಗಲ್ಪಾಡಿ ಶ್ರೀಮಠದಲ್ಲಿ ದುಂದುಭಿ ಸಂವತ್ಸರದಲ್ಲಿ ನಡೆದ ನವೀಕರಣ ಪುನಃ ಪ್ರತಿಷ್ಠಾ ನಂತರ ಘನಪಾಠಿ ಆಟಕುಕ್ಕೆ ಸುಬ್ರಾಯ ಭಟ್ಟರಿಂದ ಋಗ್ವೇದ ಪಾಠವನ್ನು ಪ್ರಾರಂಭಿಸಲಾಯಿತು. ವೇದ ಮತ್ತು ಸಂಸ್ಕೃತ ಇವೆರಡೂ ಅಭ್ಯುದಯ ಹೇತುವೆಂದು ಮನಗಂಡ ಹಿರಿಯರು ಮಠದ ಹೊರಾಂಗಣದ ಪಶ್ಚಿಮ ಭಾಗದ ಕಟ್ಟಡದಲ್ಲಿ ಸಂಸ್ಕೃತ ಪ್ರಾಥಮಿಕ ಶಾಲೆಯೊಂದನ್ನೂ ಆರಂಭಿಸಿದರು. 1923 ಇಸವಿಯಲ್ಲಿ ಕರಾಡ ಬ್ರಾಹ್ಮಣಾಭ್ಯುದಯೋದ್ಯಮಿ ಸಂಘದ ಉದಯವಾಗಿ ಈ ಪಾಠ ಶಾಲೆಯು ಅವರ ವತಿಯಿಂದ ಸುಮಾರು 23 ವರ್ಷ ಕಾಲ ನಡೆದುಬರಿತು. ವೇದ ಪಾಠವು ಸುಬ್ರಾಯ ಘನ ಪಾಠಿಗಳ ಅನಂತರ ಕುರ್ಮುಜ್ಜಿ ಸುಬ್ರಹ್ಮಣ್ಯ ಭಟ್ಟರಿಂದಲೂ ಆಮೇಲೆ ತಲೇಕ ರಾಮಚಂದ್ರ ಭಟ್ಟರಿಂದಲೂ ಅನೂಚಾನವಾಗಿ ನಡೆದು ಬಂತು. ಇದರಿಂದಲಾಗಿ ಅನೇಕ ವೇದಜ್ಞರಿಂದ ಸಮಾಜವು ಬೆಳಳಗಿತು. ಇತ್ತ ಸಂಸ್ಕೃತ ಪಾಠ ಶಾಲೆಗೆ - ಶ್ರೀಯುತ ಖಂಡೇರಿ ಅನಂತಶಾಸ್ತ್ರಿಗಳು, ಚಾಂಗುಳಿ ಸುಬ್ರಾಯ ಶಾಸ್ತ್ರಿಗಳು, ಪಡ್ರೆ ಶ್ರೀಪತಿ ಶಾಸ್ತ್ರಿಗಳವರೇ ಮೊದಲಾದ ವಿದ್ವಾಂಸರು ಅಧ್ಯಾಪಕರಾಗಿ ಒದಗಿದುದರಿಂದ ಪಾಠ ಶಾಲೆಯು ಯಶಸ್ವಿಯಾಯಿತು.
ಶ್ರೀ ಮಠದಲ್ಲಿ ಅನೇಕ ವರ್ಷಗಳ ಕಾಲ ವೇದ ಪಾರಾಯಣವೂ ತಲೇಕ ರಾಮಚಂದ್ರ ಭಟ್ಟರಿಂದ ನಡೆದು ಬಂತು. ಮುಂದೆ ದೇವಸ್ಥಾನದ ಎದುರಿಗಿರುವ ಗುಡ್ಡದಲ್ಲಿ ಪ್ರತ್ಯೇಕ ಕಟ್ಟಡವಾಗಿ ಈ ಸಂಸ್ಕೃತ ಪಾಠ ಶಾಲೆಯು ಅದಕ್ಕೆ ವರ್ಗಾಯಿಸಲ್ಪಟ್ಟು ಮಾಧ್ಯಮಿಕ ಶಾಲೆಯಾಯಿತು. ಉತ್ತಮ ದರ್ಜೆಯ ಪಾಠಶಾಲೆಯೆಂದು ಹೆಸರು ಪಡೆಯಿತು. ಇದೇ ಸಂಘವು 1956ರಲ್ಲಿ ಕರಾಡ ಬ್ರಾಹ್ಮಣ ವಿದ್ಯಾಭಿವರ್ಧಕ ಸಂಘವಾಗಿ ಪರಿವರ್ತನೆಗೊಂಡಿತು. ಸ್ಥಳ ಸಂಕೋಚದಿಂದ ಮುಂದೆ ಜಯನಗರ (ಮಾರ್ಪನಡ್ಕ)ದಲ್ಲಿ ದೊಡ್ಡ ಶಾಲಾ ಕಟ್ಟಡ ನಿರ್ಮಾಣವಾಗಿ ಮಾಧ್ಯಮಿಕ ಶಾಲೆ ಅದರಲ್ಲಿ1964ರಲ್ಲಿ ಉದ್ಘಾಟನೆಗೊಂಡಿತು. ಹಾಗೂ "ಶ್ರೀ ಅನ್ನ ಪೂರ್ಣೇಶ್ವರೀ ಸಂಸ್ಕೃತ ಹೈಸ್ಕೂಲ್" ಎಂಬುದಾಗಿ ಹೆಸರನ್ನು ಪಡೆಯಿತು. ಇದೀಗ ಉತ್ತಮ ದರ್ಜೆಯ ಹೈಸ್ಕೂಲ್ ಆಗಿ ಕಂಗೊಳಿಸುತ್ತಿದೆ.
ಬಹಳ ಜೀರ್ಣಾವಸ್ಥೆಯಲ್ಲಿದ್ದ ಈ ಅಗಲ್ಪಾಡಿ ದೇವಳವನ್ನು 79 ವರ್ಷಗಳ ಹಿಂದೆ ಸಮಾಜದ ಹಿರಿಯರು ಸೇರಿ ನವೀಕರಿಸಿ ದುಂದುಭಿ ಸಂವತ್ಸರದ ವೃಷಭ ಮಾಸ 17ರಂದು ತಾ. 31-5-1922 ರ ಶುಭ ಮುಹೂರ್ತದಲ್ಲಿ ಪುನಃ ಪ್ರತಿಷ್ಠಾಪನ ಮಹೋತ್ಸವವನ್ನು ವೈಭವೋಪೇತವಾಗಿ ನೆರವೇರಿಸಿದರು. ಇದರ ಸಂಭ್ರಮವನ್ನು ಹಿರಿಯ ವಿದ್ವಾಂಸರಾದ ಆರೆನಡ್ಕ ಶಂಕರ ಶಾಸ್ತ್ರಿಗಳು ಶ್ಲೋಕ ರೂಪವಾಗಿ ಈ ರೀತಿ ವಿವರಿಸಿರುತ್ತಾರೆ.
ಅಬ್ಧೇ ದುಂದುಭಿನಾಮ್ನಿ ಮಾಸಿ ವೃಷಭೇs ಕೂಪಾರ ದಿಕ್ಸಂಯುತೇ
ಸೌಮ್ಯ ಪುಷ್ಯಯುತೇ ದಿನೇ ಸುವಿಮಲೇ ಜೇಷ್ಠೇಚ ಪಕ್ಷೇಸಿತೇ||
ಪಂಚಮ್ಯಾಂಚತಿಥೌ ಅಭೀಷ್ಟಕಲಿತೇ ಲಗ್ನಕುಲೀರಾವೃತೇ
ವಿಪ್ರೊ ಘೈಃ ಶ್ರುತಿ ಶಾಸ್ತ್ರ ಘೋಷಣ ಪರೈಃ ದೇವ್ಯಾಃ ಪ್ರತಿಷ್ಠಾಕೃತಾ||
ಇಂದಿಗೂ ಈ ದಿನವನ್ನು ಪ್ರತಿಷ್ಠಾ ದಿನವನ್ನಾಗಿ ಆಚರಿಸುತ್ತಾರೆ.
ಬಳ್ಳಪದವು ವಾಸುದೇವ ಉಪಾಧ್ಯಾಯರು ಮತ್ತು ಜಂಬೆ ವಿಷ್ಟು ಭಟ್ಟರು ಜತೆಯಾಗಿ ಹೋಗಿ ಕೊರೋತ್ತ್ ಶ್ರೀಕೃಷ್ಣ ಪಠೇರಿಗಳಲ್ಲಿ 3 ವರ್ಷ ಕಾಲ ತಂತ್ರಾನುಷ್ಠಾನ ಅಭ್ಯಾಸಮಾಡಿ ಬಂದು ಈ ಪ್ರತಿಷ್ಠಾ ಕಲಶವನ್ನು ಪಠೇರಿಗಳ ಅಧ್ಯಕ್ಷತೆಯಲ್ಲಿ ನೆರವೇರಿಸಿದರೆಂದು ಅನುಭವಿಗಳಿಂದ ತಿಳಿದುಬರುತ್ತದೆ. ಇದೇ ಸಂದರ್ಭದಲ್ಲಿ ಧ್ವಜ ಪ್ರತಿಷ್ಠೆಯಾಗಿ 5 ದಿನಗಳ ಉತ್ಸವವೂ ಪ್ರಾರಂಭವಾಯಿತು. ಪ್ರತಿವರ್ಷವೂ ಮಾಘಮಾಸದಲ್ಲಿ 5 ದಿನಗಳ ಉತ್ಸವವು ನಡೆದುಬರುತ್ತಿದೆ.
ಇಲ್ಲಿನ ಮೊಕ್ತೇಸರರು ಪರ್ಯಾಯ ಕ್ರಮದಲ್ಲಿ ಆಡಳಿತವನ್ನು ನಡೆಸಿಕೊಂಡು ಬರುತ್ತಾರೆ. ಅರ್ಚಕರಾದಿಯಾಗಿ ಎಲ್ಲಾ ಕೆಲಸಕ್ಕೂ ನಿಯಮಿತ ಸಿಬ್ಬಂದಿ ವರ್ಗವಿದೆ. ಗೋ ಶಾಲೆ, ಮತ್ತು ಸ್ನಾನಕ್ಕೆ ಬೇಕಾದ ಕೆರೆ ಇತ್ಯಾದಿ ವ್ಯವಸ್ಥೆಗಳನ್ನು ಪೂರ್ವಜರೇ ಸಿದ್ಧಪಡಿಸಿರುತ್ತಾರೆ.
ಆಚಾರ ತಪಸಾssಮ್ನಾಯ ಜಪೇನ ನಿಯಮೇನಚ
ಉತ್ಸವೇನಾನ್ನದಾನೇನ ಕ್ಷೇತ್ರವೃದ್ಧಿಸ್ತು ಪಂಚಧಾ ॥
ಎಂಬ ವಚನಾನುಸಾರ ಕ್ಷೇತ್ರಾಭಿವೃದ್ಧಿಗೆ ಬೇಕಾದ ವ್ಯವಸ್ಥೆಗಳು ಈ ಮಠದಲ್ಲಿ ಪರಿಪೂರ್ಣವಾಗಿವೆಯೆಂದು ಹೇಳಬಹುದು.
Links:
ಶ್ರೀದೇವರ ಉತ್ಸವ ಬಲಿ
ಅಗಲ್ಪಾಡೀ ಯಾಗಗಳ ಮಹತ್ವ
https://www.youtube.com/live/cEj3NP7gMag?si=oCxWh5MZ4a67h O-J
https://youtu.be/d75OAGmR070?si=-IkEEBlH50vgIpLU
https://www.youtube.com/live/cDnJ4_SbP9Y?si=OhqefYNkHdsj7pYn
https://www.youtube.com/live/cDnJ4_SbP9Y?si=2VuAPnr6Xvw7Q0fx
https://youtu.be/7xNYjxTUNAc?si=eG0mTMQUmHNQjE8A
https://www.youtube.com/live/sCbiw7OiTyY?si=TSQBD6eqQ9i2gONj
https://youtu.be/k1Mu7T010eA?si=9-hEN8ROoF8oCTh5
- 02
- 03
ತೈರೆ ಮಾಧವ ಭಟ್ , ತೈರೆ ಮಠ
ಕರಾಡ ಬ್ರಾಹ್ಮಣರ ಕುಲದೇವತೆ ದುರ್ಗಾಪರಮೇಶ್ವರೀ ದೇವಿ. ತೈರೆ, ಅಗಲ್ಪಾಡಿ, ಆವಳ, ಕೊಂಗೂರು ಎಂಬ ನಾಲ್ಕು ಮಠಗಳು ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಪ್ರದೇಶದಲ್ಲಿ ಕರಾಡರ ಆರಂಭ ಕಾಲದ ಆರಾಧನಾ ಸ್ಥಳಗಳಾಗಿದ್ದು "ಮಠ ಚತುಷ್ಟಯ"ಗಳೆಂದು ಪ್ರಸಿದ್ಧವಾಗಿವೆ.
ಈಗಲೂ ಕರಾಡರಲ್ಲದ ಇತರರು ಈ ನಾಲ್ಕು ಮಠಗಳ ಪ್ರಾಶಸ್ಕೃವನ್ನು, ಕರಾಡರ ಬದುಕಿನ ವಿವಿಧ ಹಂತಗಳಲ್ಲಿ ಬೀರುವ ಪ್ರಭಾವವನ್ನು ಗುರುತಿಸುತ್ತಿರುವುದು ಗಮನಾರ್ಹ.
ಐತಿಹ್ಯ :
ನಂಬೂದಿರಿ ಬ್ರಾಹ್ಮಣನೋರ್ವನು ಕನ್ಯಾಕುಮಾರಿಯ ದುರ್ಗಾ ಪರಮೇಶ್ವರಿಯನ್ನು ಪ್ರಸನ್ನೀಕರಿಸಿಕೊಂಡು ಉತ್ತರಕ್ಕೆ ತೆರಳಿದನಂತೆ. ತಾನು ತಂದ ಒಂದು ವಿಗ್ರಹವನ್ನು ಉತ್ತರ ಮಲಬಾರಿನ "ಚೆರುಕು" ನ್ನು ಎಂಬ ಸ್ಥಳದಲ್ಲಿ ಪ್ರತಿಷ್ಠಾಪಿಸಿದನು. ಅಲ್ಲಿಂದ ಉತ್ತರಕ್ಕೆ ಸಂಚರಿಸುತ್ತಾ ಪಯಸ್ವಿನಿಯ ದಕ್ಷಿಣ ತೀರದಲ್ಲಿರುವ ತಕ್ಕಿಲ್ ಗ್ರಾಮದ ತೈರೆ ಕುಟುಂಬದವರ ಆದರಾತಿಥ್ಯ ಮತ್ತು ಸೇವೆಯಿಂದ ತಾನು ಹೊಂದಿದ್ದ ರೋಗದಿಂದ ಗುಣಮುಖವಾಗುವನು. ಕೃತಜ್ಞತಾಭಾವದಿಂದ ಆತನು "ಚರುಕು"ನ್ನು ದೇವಿಕ್ಷೇತ್ರ ದಿಂದ ತನ್ನೊಂದಿಗೆ ತಂದಂತಹ 'ಜ್ಯೋತಿ' ಯನ್ನು ಬೆಳಗಿಸಿ ದುರ್ಗಾಪರಮೇಶ್ವರಿಯ ಶಿಲಾಮೂರ್ತಿಯೊಂದಿಗೆ "ಪ್ರಭಾಳ ಶಕ್ತಿ" (ಕಬ್ಬಿಣದಿಂದ ತಯಾರಿಸಿಲಾದ ಕತ್ತರಿಯಂತಿರುವ ಎರಡು ಶಸ್ತ್ರಗಳು) ಯನ್ನೂ ತೈರೆ ಕುಟುಂಬದ ಗೃಹ ದೇವತೆಯಾಗಿ ಪ್ರತಿಷ್ಠಾಪಿಸಿದನು.
ತೀರಾ ಬಡತನದಲ್ಲಿದ್ದ ತೈರೆ ಕುಟುಂಬದವರು ನಿಷ್ಠಾವಂತ ಭಕ್ತರಾಗಿದ್ದರು. ಮುಳಿ ಹೊದಿಸಿದ ಗುಡಿಯಿಂದ ದೇವಿಯ ಶಿಲಾ ವಿಗ್ರಹವನ್ನು ಪ್ರಸಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಬಯಸಿದಾಗ, ನಂಬೂದಿರಿ ಬ್ರಾಹ್ಮಣ ಆರಂಭದಲ್ಲಿ ದೀಪ ಬೆಳಗಿಸಿದ ಹಾಗೂ ವಿಗ್ರಹ ಪ್ರಭಾಳ ಶಕ್ತಿ ಇರಿಸಿದ ಸ್ಥಳದಲ್ಲೇ ದೇವಾಲಯ ನಿರ್ಮಿಸ ಬೇಕೆಂದು ಕಂಡು ಬಂದಿತು.
ಇತಿಹಾಸ :
1960-61ರಲ್ಲಿ ದುಬಾರಿ ವೆಚ್ಚದಲ್ಲಿ ಬ್ರಹ್ಮಕಲಶ ಮತ್ತು ಅಷ್ಟಬಂಧ ಕಲಶಗಳು ನೆರವೇರಲ್ಪಟ್ಟವು. ಈ ಸಂದರ್ಭದಲ್ಲಿಯೇ ದುರ್ಗಾ ಪರಮೇಶ್ವರಿಯ ಬಂಗಾರದ ವಿಗ್ರಹದೊಂದಿಗೆ ಶ್ರೀ ಚಕ್ರವನ್ನೂ ಪ್ರತಿಷ್ಠಾಪಿಸಲಾಯಿತು. ಬಡವರಾಗಿದ್ದ ನಿಷ್ಠಾವಂತ ದೇವಿ ಆರಾಧಕರಾದ ತೈರೆ ಕುಟುಂಬದವರು ಕ್ರಮೇಣ ಹೆಚ್ಚು ಅನುಕೂಲವಂತರೆನಿಸಿ ಪೂಜಾ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಡೆಸುವಂತಾಯಿತು.
ನಿತ್ಯ ನೈಮಿತ್ತಿಕಗಳು :
ಈ ದೇವಾಲಯದಲ್ಲಿ ಪ್ರತಿದಿನವೂ ಗಣಪತಿ ಹೋಮ, ಪ೦ಚಾಮೃತ, ರುದ್ರಾಭಿಷೇಕದೊಂದಿಗೆ ಅನ್ನ ನೈವೇದ್ಯಗಳೂ ಪ್ರಾತಃಕಾಲದ ಪೂಜೆ, ಮಧ್ಯಾಹ್ನದ ಮಹಾಪೂಜೆ, ರಾತ್ರಿಪೂಜೆ - ಹೀಗೆ ತ್ರಿಕಾಲಗಳಲ್ಲಿಯೂ ಪೂಜಾಕಾರ್ಯಗಳನ್ನೂ ನಡೆಸಲಾಗುತ್ತದೆ. ಉಪವಾಸವ್ರತದೊಂದಿಗೆ ದೇವಿಪಾರಾಯಣ, ವಿಶೇಷ ಪೂಜೆ, ಪ್ರಾರ್ಥನೆ, ಅನ್ನಸಂತರ್ಪಣೆಗಳನ್ನು ನವರಾತ್ರಿಯಲ್ಲಿ 9 ದಿನಗಳಲ್ಲಿಯೂ ವಿಜೃಂಭಣೆಯಿಂದ ನಡೆಸಲಾಗುತ್ತದೆ. ತುಳುನಾಡು ಹಾಗೂ ಕೇರಳದ ಇತರ ದೇವಸ್ಥಾನಗಳಲ್ಲಿರುವ ಪದ್ಧತಿಯಂತೆ ಬೆಡಿ, ಆರಾಟುಗಳೊಂದಿಗೆ 5 ದಿನಗಳವರೆಗೆ ವಾರ್ಷಿಕ ಉತ್ಸವ, ಉತ್ಸವದ ಮರುದಿನ ವಿಷ್ಣು ಮೂರ್ತಿ ಭೂತದ ಕೋಲವನ್ನೂ ನಡೆಸಲಾಗುತ್ತದೆ. ಕಾರ್ತಿಕಮಾಸದ ಹುಣ್ಣಿಮೆಯ ದಿನ "ಕಾರ್ತಿಕ ಪೂರ್ಣಿಮಾ" ದಿನದ ಆಚರಣೆಯನ್ನೂ ವಸಂತಮಾಸದ ಹುಣ್ಣಿಮೆಯ ದಿನ 'ವಸಂತ ಪೌರ್ಣಿಮಾ' ದಿನದ ಆಚರಣೆಯನ್ನು ವಿಶಿಷ್ಟ ಕಾರ್ಯಗಳಿಂದ ನೆರವೇರಿಸಲಾಗುತ್ತದೆ. ಪ್ರತಿ ತಿಂಗಳ ಮೊದಲನೆಯ ಮಂಗಳವಾರ 'ತಿಂಗಳ ಮಂಗಳವಾರ (ಪ್ರಥಮ ಮಂಗಳವಾರ) ಎಂಬ ನಿಮಿತ್ತದಿಂದ ನವಕಾಭಿಷೇಕ ಪೂರ್ವಕ ಮಹಾಪೂಜೆಯನ್ನು ನಡೆಸಲಾಗುತ್ತದೆ.
ಪ್ರತಿವರ್ಷವೂ ಕಳಭಾಭಿಷೇಕದೊಂದಿಗೆ "ಪ್ರತಿಷ್ಠಾದಿನ" ವನ್ನು 'ಒತ್ತೆಕೋಲ' (ಕ೦ಡಸೇವೆ)ದೊಂದಿಗೆ ಆಚರಿಸಲಾಗುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ 'ಅನುಜ್ಞಾಕಲಶ' ವನ್ನೂ ನೆರವೇರಿಸಲಾಯಿತು. ತೈರೆ ಕುಟುಂಬದವರ ದೇವಿ ಭಕ್ತರ ಪರಿಶ್ರಮ, ಸತತ ಪ್ರಯತ್ನಗಳಿಂದ 'ದುರ್ಗಾ ಪರಮೇಶ್ವರೀ ಕಲ್ಯಾಣ ಮಂಟಪ' ವನ್ನೂ ನಿರ್ಮಿಸಲಾಯಿತು.
ಸ್ಥಿತಿಗಳು :
ವಿದ್ಯಾದಾನದೊಂದಿಗೆ ನಿರಂತರ ಅನ್ನಸಂತರ್ಪಣೆಗಳನ್ನು ಮಾಡುತ್ತಿರುವ 'ಆರಾಧನಾ ಕೇಂದ್ರ' ಗಳು ಮಠಗಳೆಂದು ಕರೆಯಲ್ಪಡುತ್ತವೆ. ಭಾರತ ದೇಶದ ಸಾಂಸ್ಕೃತಿಕ ಮುನ್ನಡೆಯಲ್ಲಿ, ಧಾರ್ಮಿಕ-ಪಾರಮಾರ್ಥಿಕ ಸಾಧನೆಗಳಿಗೆ ಮಹತ್ತರ ಪಾತ್ರವಿದೆ. ದೇವಾಲಯ ಮತ್ತು ಮಠಗಳು ಜನರ ಧಾರ್ಮಿಕ ಜೀವನದ ಚೌಕಟ್ಟನ್ನು ಭದ್ರವಾಗಿ ರೂಪಿಸಿರುವುದನ್ನು ಗಮನಿಸಬಹುದು.
ಧಾರ್ಮಿಕ ತಾತ್ವಿಕ ಶಿಕ್ಷಣ ಮತ್ತು ತರಬೇತಿ ಮಠಗಳ ಪ್ರಧಾನ ಉದ್ದೇಶ. ಅವು ದೇವಾಲಯಗಳಿಗೆ ಪೂರಕವಾಗಬಲ್ಲ ಧಾರ್ಮಿಕ ಸಂಸ್ಥೆಗಳು, ದೇವಾಲಯಗಳಲ್ಲಿ ನಡೆಸಲಾಗುವ ಸಾಮೂಹಿಕ ದೇವಪೂಜಾಕಾರ್ಯಗಳಿಗೆ ಅವಶ್ಯಕವಾದ ಸ್ವಧರ್ಮ ಶ್ರದ್ಧೆ, ಸ್ವಾಧ್ಯಾಯ, ಪ್ರವಚನ, ತಪೋನಿಷ್ಟೆ, ಗುರುದೇವತಾಭಕ್ತಿ ಇವುಗಳನ್ನು ರೂಪಿಸುವ ಕಾರ್ಯ ಮಠಗಳದ್ದಾಗಿತ್ತು.
ಶಾಲಾ ಕಾಲೇಜುಗಳ ಲೌಕಿಕ ವಿದ್ಯಾಕಾರ್ಯಗಳಿಗೂ, ಮಠದೇವಾಲಯಗಳ ಧಾರ್ಮಿಕ ವಿದ್ಯಾಕಾರಗಳಿಗೂ ಪರಸ್ಪರ ಸಂಬಂಧ ಮತ್ತು ಪರಸ್ಪರ ಪೋಷಣೆ ಏರ್ಪಡಬೇಕಾದುದು ಧರ್ಮ. ಸ್ವಧರ್ಮಶ್ರದ್ಧೆ, ತತ್ವಜ್ಞಾನ, ಭಕ್ತಿ, ವೈರಾಗ್ಯಗಳಿಗೆ ಪೋಷಕವಾದ ಸಾತ್ವಿಕ ಗುಣಶೀಲಗಳ ಅಭ್ಯಾಸಕ್ಕೆ ತಕ್ಕ ವಾತಾವರಣ ಮಠ, ದೇವಾಲಯಗಳಲ್ಲಿ ಬೆಳೆಯಬೇಕು.
ತೈರೆ ಮಠದಲ್ಲಿ, ಈ ಶತಮಾನದ ಆರು, ಏಳನೇ ದಶಕಗಳಲ್ಲಿ ಶ್ರೀಯುತ ಬಳ್ಳಪದವು ವಾಸುದೇವ ಉಪಾಧ್ಯಾಯರ ಶಿಷ್ಯರಾಗಿದ್ದ ತೈರೆ ನಾರಾಯಣಭಟ್ಟರು 'ಗುರುಕುಲ’ ಪದ್ಧತಿಯಂತೆ ವಿದ್ಯಾದಾನವನ್ನು ಮಾಡುತ್ತಿದ್ದರು. ಪೌರೋಹಿತ್ಯ ಶಿಕ್ಷಣದೊಂದಿಗೆ ವೇದಮಂತ್ರಗಳನ್ನೂ ಕಲಿಸುತ್ತಾ ಸಮಾಜಸೇವೆ ಗೈದುದನ್ನು ಕರಾಡ ಸಮಾಜ ಬಾಂಧವರು ಸ್ಮರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಹರ್ಷಿ ವಿದ್ಯಾಸಂಸ್ಥೆಯವರು ತೈರೆ ದೇವಸ್ಥಾನದಲ್ಲಿ 'ವೇದ ಮಂತ್ರ,ಪೌರೋಹಿತ್ಯಗಳ ಶಿಕ್ಷಣವನ್ನು ನೀಡುತ್ತಿರುವುದು ಗಮನಾರ್ಹ ವಿಷಯ. ಸಮಾಜ ಬಾಂಧವರು ವಿದ್ಯಾದಾನವನ್ನು
ಪಡೆಯುತ್ತಾ ಸರ್ವತೋಮುಖ ಏಳ್ಳೆಯನ್ನು ಸಾಧಿಸಬಹುದು.
- 04
ಡಾ . ಸುಬ್ರಹ್ಮಣ್ಯ ಭಟ್ M.Sc., Ph.d.
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು
ಕರಾಡ ಬ್ರಾಹ್ಮಣರ ಪ್ರಧಾನವಾದ ನಾಲ್ಕು ಮಠಗಳಲ್ಲಿ ಒಂದೆನಿಸಿದ ಕೊಂಗೂರು ಮಠವು ಮಂಗಳೂರಿನ ಕುಲಶೇಖರದ ಬಳಿ ಇದೆ. ಸುಮಾರು 400 ವರ್ಷಗಳಷ್ಟು ಪುರಾತನವೆಂಬ ಹೇಳಿಕೆ ಇರುವ ಈ ಮಠಕ್ಕೆ, ಮೊದಲು 40 ಒಕ್ಕಲುಗಳಿದ್ದುವು ಎಂದು ಹೇಳುತ್ತಾರೆ.
ಈಗ ಕೆಲವು, ಪ್ರಾರಂಭದ ಮನೆಗಳು ಕಡಿಮೆಯಾಗಿವೆ. ಹೊಸ ಮನೆಗಳು ಸೇರ್ಪಡೆಯಾಗಿವೆ. ಆರಂಭ ಕಾಲದಿಂದಲೇ ಇದ್ದ, ಕೆಲವು ಮನೆಗಳೆಂದರೆ ಕುಂಟಲ್ಲಾಡಿ, ಕಕ್ಕೆಬೆಟ್ಟು, ಮಂದಾರ, ಕೊಂಚಾಡಿ, ಕೋಡಿಖಂಡ ಇತ್ಯಾದಿಗಳು .
ನಾಲ್ಕು ಮಠಗಳಲ್ಲಿ, ಕೊಂಗೂರು ಮಠವೇ, ಪ್ರಥಮವಾಗಿ ಅಸ್ತಿತ್ವಕ್ಕೆ ಬಂದಿರುವಂಥದ್ದು, ಆ ಬಳಿಕ, ಉಳಿದ ಮೂರು ಮಠಗಳು ಸ್ಥಾಪಿಸಲ್ಪಟ್ಟವು ಎಂಬ ವದಂತಿಯೂ ಇದೆ. ನಡುಮನೆ, ಮೂಡ ಕೋಡಿ ಮನೆಗಳು ಮಾತ್ರವಲ್ಲ ಮರೋಳಿ ಇತ್ಯಾದಿ ಮನೆಗಳು ಇದರಲ್ಲಿ ಸೇರ್ಪಡೆಗೊಂಡಿವೆ. ಆಡಳಿತವನ್ನು ಕೊಂಗೂರು ಮಠದ, ಮನೆಯವರು ನಡೆಸಿಕೊಂಡು ಬಂದಿದ್ದಾರೆ. ನಿತ್ಯಪೂಜೆ, ನೈಮಿತ್ತಿಕ ಪೂಜೆ, ನವರಾತ್ರಿ ಉತ್ಸವ ಕಾರ್ತಿಕ ಪೂರ್ಣಿಮೆ ಉತ್ಸವಗಳು, ವಸಂತ ಸಮರಾಧನೆ ಇತ್ಯಾದಿ ಕಾಠ್ಯಕ್ರಮಗಳು, ಕೊಂಗೂರು ಮಠದ, ಮನೆಯವರ ಆಡಳಿತೆಯಲ್ಲಿ, ಊರ ಜನರ ಸಹಕಾರದಿಂದ, ಕರಾಡ ಬಾಂಧವರ ಸಹಯೋಗದಿಂದ ನಡೆಸಲ್ಪಡುತ್ತದೆ.
**********
ಸುಮಾರು ೩೫೦ ವರ್ಷಗಳಷ್ಟು ಪುರಾತನ ಈ ಕೊಂಗೂರು ಮಠ ಶ್ರೀ ದುರ್ಗಾಪರಮೇಶ್ವರೀ ಪುಣ್ಯ ಕ್ಷೇತ್ರವು ಸ್ಥಳೀಯವಾಗಿ ಬಹಳ ಪ್ರಸಿದ್ಧವಾಗಿದೆ.
ಸರಳ ಮಣ್ಣಿನ ಗೋಡೆಯಿದ್ದ ಈ ದೇವಸ್ಥಾನವು ಭಕ್ತರ ನಂಬುಗೆಯ ತಾಣವಾಗಿದೆ. ನೀರಿನ ಆಶ್ರಯವಿರುವ, ಸಸ್ಯ ಸಮೃದ್ಧಿಯ ನಾಗ ಸನ್ನಿಧಿಯಾದ, ಈ ಕ್ಷೇತ್ರದ ಸ್ಥಳದಲ್ಲಿ ಭೂತಾರಾಧನೆಯೂ ನಡೆಯುತ್ತದೆ. ಇಲ್ಲಿನ ದೈವಗಳಾದ ಜಟಾಧಾರಿ, ಬ್ರಹ್ಮರ ದೈವ, ರಕ್ತೇಶ್ವರೀ ದೈವ ಮತ್ತು ಗುಳಿಗ ದೈವಗಳು ಸ್ಥಳೀಯರ ಭಕ್ತಿಯ ದ್ಯೋತಕಗಳಾಗಿವೆ. ಇನ್ನು ಈ ಸ್ಥಳದಲ್ಲಿ ಸಂರಕ್ಷಣಾ ಉದ್ದೇಶದಿಂದ ಆರಾಧಿಸಿಕೊAಡು ಬಂದ ಕಲ್ಲುರ್ಟಿ, ಪಂಜುರ್ಲಿ ದೈವಗಳೂ ಬಹಳ ಕಾರ್ಣಿಕ ಉಳ್ಳವುಗಳಾಗಿವೆ. ಈ ಎಲ್ಲಾ ದೈವಗಳ ವಾರ್ಷಿಕ ಸರಳ ಆರಾಧನಾ ಕ್ರಮಗಳಾದ ಪರ್ವ ಸಲ್ಲಿಕೆಯೊಂದಿಗೆ ಸಂತೃಪ್ತಿ ಪಡೆಯುವ ಗುಣ ಉಳ್ಳವುಗಳಾಗಿವೆ. ನಂಬಿದ ಭಕ್ತರ ಕೈ ಬಿಡದೆ ಸಂರಕ್ಷಿಸಿದ ಪ್ರತೀತಿ ಇದೆ. ಕ್ಷೇತ್ರವು ಸಮೀಪದ ಪುರಾತನ ಕ್ಷೇತ್ರಗಳಾದ ಕುಲಶೇಖರದ ವೀರನಾರಾಯಣ ದೇವಸ್ಥಾನ ಮತ್ತು ಕೋಡಿಕಂಡದ ಕೊಡAಗ ಮುರದಲ್ಲಿರುವ ವೈದ್ಯನಾಥ ದೈವಸ್ಥಾನದೊಂದಿಗೆ ಸಂಬAಧ ಹೊಂದಿತ್ತು ಎoಬ ಪ್ರತೀತಿ ಇದೆ.
ಈ ಕ್ಷೇತ್ರದ ಆಡಳಿತ ಮತ್ತು ಆರಾಧನಾ ವ್ಯವಸ್ಥೆಯನ್ನು ಕೊಂಗೂರು ಮಠದ ಕುಟುಂಬದವರು ಭಕ್ತ ಸಮೂಹದ ಸಹಾಯ ಸಹಕಾರದೊಂದಿಗೆ ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬಂದಿರುತ್ತಾರೆ. ಭಕ್ತರ ಆಸಕ್ತಿ, ಹಿತಗಳಿಗೆ ಅನುಕೂಲವಾಗುವಂತೆ ಮಾನವೀಯ ದೃಷ್ಟಿಕೋನವನ್ನು ಮುಂದಿಟ್ಟು ಈ ಕ್ಷೇತ್ರವನ್ನು ನಡೆಸಿಕೊಳ್ಳುತ್ತಿದ್ದಾರೆ. ಈ ಪರಂಪರೆಯು ಮುಂದುವರಿಯಲಿದೆ.
ಇರುವ ದೇವಸ್ಥಾನದ ಆಡಳಿತವನ್ನು ಕೆ.ಎನ್.ಬಿ.ಎಮ್ ಟ್ರಸ್ಟ್ (ರಿ) ವತಿಯಿಂದ ನಡೆಸುತ್ತಿದ್ದಾರೆ. ಸುತ್ತಲಿನ ರೈಲುಮಾರ್ಗ ಇತ್ಯಾದಿ ಜನಪ್ರಿಯ, ಜನಪರ ಯೋಜನೆಗಳು ಈ ಕ್ಷೇತ್ರದ ಮೇಲೆ ಪರಿಣಾಮ ಬೀರಿದರೂ ಸದ್ಯಕ್ಕೆ ಎಲ್ಲವೂ ಸರಿದೂಗಿ ಮುನ್ನಡೆಯುತ್ತಿದೆ. ಬಹಳ ಹೆಚ್ಚಿನ ಅಭಿವೃದ್ಧಿ ಹೊಂದಿರುತ್ತಿರುವ ಪದವು ಗ್ರಾಮ ಕುಲಶೇಖರ ಮಂಗಳೂರು ಪರಿಸರದಲ್ಲಿ ಭಕ್ತಿ, ಬದ್ಧತೆಗಳಿರುವ ಹಲವು ಭಕ್ತ ಕುಟುಂಬಗಳ ಅಭಿಪ್ರಾಯ ಮತ್ತು ಆಶಯಗಳ ಆಧಾರದ ಮೇಲೆ ಈ ದೇವಸ್ಥಾನದ ಜೀರ್ಣೋದ್ಧಾರದ ಅಗತ್ಯ ಕಂಡುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ೨೦೧೧ನೇ ಫೆಬ್ರವರಿಯಲ್ಲಿ ಭಕ್ತ ಸಾರ್ವಜನಿಕರ ಉಪಸ್ಥಿತಿಯಲ್ಲಿ ಪ್ರಸಿದ್ಧ ಜ್ಯೋತಿಷಿ ಶ್ರೀ ಬಿ. ರಂಗನಾರಾಯಣ ಭಟ್ಟ, ಮಧೂರು, ಕಾಸರಗೋಡು ಇವರಿಂದ ಅಷ್ಟಮಂಗಳ ಪ್ರಶ್ನೆ ವ್ಯವಸ್ಥೆ ಮಾಡಲಾಗಿತ್ತು. ಜ್ಯೋತಿಷಿಯವರಿಂದ ಅಷ್ಟಮಂಗಳ ಪ್ರಶ್ನೆಯಲ್ಲಿ ಪಡೆದ ನಿರ್ದೇಶನಗಳಂತೆ ಜೀರ್ಣೋದ್ಧಾರ ಕಾರ್ಯಕ್ರಮಗಳನ್ನು ಕೈಗೊಳ್ಳುವ ನಿರ್ಧಾರ ಮಾಡಲಾಗಿತ್ತು. ಈ ಸಂಬAಧ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ವ್ಯವಸ್ಥೆ ಮತ್ತು ಅವುಗಳ ಪೌರೋಹಿತ್ಯವನ್ನು ಮಂಗಳೂರಿನ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಪುರೋಹಿತರಾದ ಶ್ರೀ ಜಯರಾಮ ಭಟ್ ಚಿಂಚಲ್ಕರ್ ಇವರು ನಿರ್ವಹಿಸುತ್ತಿದ್ದಾರೆ.
ಈ ಕ್ಷೇತ್ರದ ಜೀರ್ಣೋದ್ಧಾರದ ಶಿಲ್ಪ ನಿದೇಶನಗಳನ್ನು ಕುಡುಪು ಅನಂತ ಪದ್ಮನಾಭದೇವಸ್ಥಾನದ ಶ್ರೀ ಕೃಷ್ಣರಾಜ ತಂತ್ರಿಯವರು ನೀಡಿರುತ್ತಾರೆ. ದಿನಾಂಕ ೨೭.೦೧.೨೦೧೩ನೇ ಆದಿತ್ಯವಾರ ಬೆಳಿಗ್ಗೆ ಗಂಟೆ ೯.೨೧ರ ಕುಂಭ ಲಗ್ನ ಸುಮೂಹುರ್ತದಲ್ಲಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಾಸರಗೋಡು ಇದರ ಆಡಳಿತ ಮೊಕ್ತೇಸರರಾದ ಆನೆಮಜಲು ಶ್ರೀ ವಿಷ್ಣುಭಟ್ರವರು ಜೀರ್ಣೋದ್ಧಾರ ಕಾರ್ಯಕ್ರಮದ ಶಿಲಾನ್ಯಾಸವನ್ನು ತಮ್ಮ ದಿವ್ಯ ಹಸ್ತಗಳಿಂದ ನೆರವೇರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ
ಮಹಾಸ್ವಾಮಿಯವರ ಅನುಮತಿ ಮತ್ತು ಆಶೀರ್ವಚನ ಪಡೆಯಲಾಗಿದೆ. ಈ ಕ್ಷೇತ್ರದ ಭಕ್ತಾದಿಗಳು ಸರಳಭಕ್ತಿ, ಪ್ರಾರ್ಥನೆ ಪೂಜಾದಿಗಳಿಂದ ತಮ್ಮ
ಮನೋಭಿಷ್ಟಗಳನ್ನು ನೆರವೇರಿಸಿಕೊಂಡು ಸಂತಸದ ಸಾರ್ಥಕ ಜೀವನವನ್ನು ನಡೆಸುತ್ತಿದ್ದಾರೆ. ನಂಬಿದವರಿಗೆ ಇಂಬು ಕೊಡುವ ಈ ಕ್ಷೇತ್ರಕ್ಕೆ ಬಂದು ಆಶೀರ್ವಚನ ಪಡೆದು ಕಾರ್ಯ ನಿರ್ವಹಿಸುತ್ತಿರುವ ಇಲ್ಲಿನ ಭಕ್ತರು ಯಶಸ್ಸಿನ ಹಾದಿಯಲ್ಲಿ ಜೀವನ ಸೌಖ್ಯ ಮತ್ತು ಮನಃಶಾಂತಿಯನ್ನು ಪಡೆಯುತ್ತಿದ್ದಾರೆ.
ಶಾಂತ ವಾತಾವರಣ, ಸರಳತೆ, ಸ್ವಚ್ಛತೆ ಮತ್ತು ಮನಃಶಾಂತಿಗೆ ಹಿತವಾದ ಈ ಕ್ಷೇತ್ರ ಈಗಾಗಲೇ ಬಹಳಷ್ಟು ಭಕ್ತರನ್ನು ಆಕರ್ಷಿಸುತ್ತಿದೆ. ನಿಗೂಢವಾದ ಕಾರ್ಣಿಕವುಳ್ಳ ಶ್ರದ್ಧೆಯುಳ್ಳ ಭಕ್ತರಿಗೆ ಮಾತ್ರ ಎಟಕುವ ಈ ಕ್ಷೇತ್ರ ಎಲ್ಲಾ ವರ್ಗದ ಭಕ್ತರ ವಿಶ್ವಾಸಕ್ಕೆ ಪಾತ್ರವಾಗಿದೆ. ಶುಭಕಾರ್ಯಗಳು, ಸಂತಾನಪ್ರಾಪ್ತಿಗಾಗಿ ಪ್ರಾರ್ಥನೆ, ವೃದ್ಧಾಪ್ಯದಲ್ಲಿ ಮನಃಶಾಂತಿ ಕೋರಿ ಬರುವ ಬಹಳಷ್ಟು ಭಕ್ತರು ಇಲ್ಲಿದ್ದಾರೆ.
ಮುಂದಿನ ದಿನಗಳಲ್ಲಿ ಭಕ್ತಾದಿಗಳಿಗೆ ಸುಲಭದ, ವ್ಯವಸ್ಥಿತವಾದ, ಪ್ರೀತಿ ಗೌರವ ಪೂರ್ವಕ ಆರಾಧನಾ ವ್ಯವಸ್ಥೆಗಳನ್ನು ಸರ್ವರ ಸಹಕಾರದಿಂದ ನೀಡುವ ಶ್ರದ್ಧೆ ಮತ್ತು ಆಸಕ್ತಿ ಆಡಳಿತ ವರ್ಗದಲ್ಲಿದೆ. ಜನಾದರಣೀಯವಾಗಿ ಈ ಕ್ಷೇತ್ರ ಬೆಳೆಯಲಿದೆ ಎಂಬ ವಿಶ್ವಾಸ ಇಲ್ಲಿನ ಎಲ್ಲಾಭಕ್ತವರ್ಗದಲ್ಲಿದೆ.
ಜೀರ್ಣೋದ್ಧಾರ ಕೆಲಸಗಳು ಹಾಗೂ ಬ್ರಹ್ಮ ಕಲಶೋತ್ಸವ: ೨೦೧೩ರ ಜನವರಿಯಲ್ಲಿ ಪ್ರಾರಂಭಗೊAಡ ಜೀರ್ಣೋದ್ಧಾರ ಪ್ರಕ್ರಿಯೆಗಳು ಸಮಸ್ತ ಭಕ್ತಬಾಂಧವರ ಸಹಕಾರಗಳೊಂದಿಗೆ ೨೦೧೮ರ ಅಂತ್ಯದ ವೇಳೆಗೆ ಪೂರ್ಣಗೊಂಡಿರುತ್ತವೆ. ದೇವಸ್ಥಾನವು ಅತ್ಯಂತ ಸುಂದರವಾಗಿ ಶಾಸ್ತಿçÃಯವಾಗಿ
ನಿರ್ಮಾಣಗೊಂಡಿರುತ್ತದೆ. ಶಿಲಾಮಯ ಪಂಚಾAಗದ ಕೆಲಸವನ್ನು ತಮಿಳುನಾಡು ಮೂಲದ ಕಾರ್ಕಳದಲ್ಲಿ ನೆಲೆಸಿರುವ ಶ್ರೀ ಗೋಪಾಲ ಮೇಸ್ತಿç ತಂಡದವರು ಮಾಡಿರುತ್ತಾರೆ.
ಗರ್ಭಗುಡಿಯ ಕೆಂಪುಕಲ್ಲಿನ ಸುಂದರವಾದ ಕೆಲಸವನ್ನು ಹುಬ್ಬಳ್ಳಿಯ ಶ್ರೀ ಕುಬೇರ ಮತ್ತು ತಂಡದವರು ರಚಿಸಿ ಕೊಟ್ಟಿರುತ್ತಾರೆ. ತೀರ್ಥ ಬಾವಿಯ ಕೆಲಸವನ್ನು ಶ್ರೀಯುತ ರಿಚರ್ಡ್ರವರು ಮಾಡಿರುತ್ತಾರೆ. ದಾರು ಶಿಲ್ಪದ ಕೆಲಸಗಳನ್ನು ಶ್ರೀ ಪುಷ್ಪರಾಜ ಆಚಾರ್ಯ ಬಳಗದವರಿಂದ ನಡೆದಿರುತ್ತದೆ. ಸುತ್ತು ಪೌಳಿಯ ಸಂಪೂರ್ಣ ಕೆಲಸ, ಒಳಾಂಗಣದ ಕಲ್ಲುಹಾಸುವಿಕೆ, ದೇವಸ್ಥಾನದ ಉತ್ತರ ಭಾಗದಲ್ಲಿರುವ ಕೆರೆಯ ಕೆಲಸ ಇತ್ಯಾದಿಗಳನ್ನು ಮಂಗಳೂರಿನ ಪ್ರತಿಷ್ಠಿತ ದಿವಾಕರ್ ಕನ್ಸ÷್ಟçಕ್ಷನ್ನ ಶ್ರೀ ದಿವಾಕರ ಮತ್ತು ಅವರ ಸಹೋದರ ರೋಹಿತಾಕ್ಷ ಬಳಗದವರು ಮಾಡಿರುತ್ತಾರೆ. ಈ ಎಲ್ಲಾ ಕೆಲಸಗಳೂ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಶ್ರೀ ಕೃಷ್ಣರಾಜ ತಂತ್ರಿಯವರ ಶಿಲ್ಪ ನಿರ್ದೇಶನದಲಿ,್ಲ ಕೊಂಗೂರು ಮಠದ ಶ್ರೀ ಅನಂತ ಭಟ್(ಬಿ.ಇ)ಇವರ ತಾಂತ್ರಿಕ ನಿರ್ದೇಶನದಲ್ಲಿ ನಡೆದಿರುತ್ತದೆ.
ಈ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವವು ದಿನಾಂಕ ೧೪.೦೧.೨೦೧೯ರಿAದ ೧೮.೦೧.೨೦೧೯ರವರೆಗೆ ನಡೆದಿರುತ್ತದೆ. ಸ್ವಸ್ತಿ ಶ್ರೀ ವಿಲಂಬಿ ನಾಮ ಸಂವತ್ಸರದ ಪುಷ್ಯ ಶುದ್ಧ ದ್ವಾದಶಿಯ ದಿನಾಂಕ ೧೮.೦೧.೨೦೧೯ನೇ ಶುಕ್ರವಾರದ ಪ್ರಾತಃಕಾಲ ೮.೪೦ರ ಕುಂಭಲಗ್ನದಲ್ಲಿ ನೂತನ ಗರ್ಭಗೃಹದಲ್ಲಿ ವೇ| ಮೂ| ಶ್ರೀ ಜಯರಾಮ ಭಟ್ ಚಿಂಚಲ್ಕರ್, ಪ್ರಧಾನ ಕಾಶೀ ಸದನ, ಡೊಂಗರಕೇರಿ, ಮAಗಳೂರು ಇವರ ನಿರ್ದೇಶನದಂತೆ ಬಿಂಬ ಪ್ರತಿಷ್ಠೆ ನಡೆದಿರುತ್ತದೆ. ಬ್ರಹ್ಮಕಲಶ ಸಹಿತ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಶ್ರೀ ಶಂಕರಾಚಾರ್ಯ ದಕ್ಷಿಣಾಮ್ನಾಯ
ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸನ್ನಿಧಾನಂಗಳವರ ಮತ್ತು ತತ್ಕಮಲ ಸಂಜಾತರಾದ ಜಗದ್ಗುರು ಶ್ರೀ ಶ್ರ್ರೀ ವಿಧುಶೇಖರ ಭಾರತೀಮಹಾ ಸನ್ನಿಧಾನಂಗಳವರ ಪೂರ್ಣಾನುಗ್ರಹಗಳೊಂದಿಗೆ ನಡೆದಿರುತ್ತದೆ.
ಬ್ರಹ್ಮ ಕಲಶೋತ್ಸವದ ಪುಣ್ಯಾವಸರವು ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ವಿದ್ಯಾನರಸಿಂಹ ಭಾರತೀ ಮಹಾಸ್ವಾಮೀಜಿ, ಕರವೀರ ಪೀಠ ಕೊಲ್ಲಾಪುರ, ಮಹಾರಾಷ್ಟ ಇವರ ದಿವ್ಯ ಉಪಸ್ಥಿತಿ ಮತ್ತು ಆಶೀರ್ವಚನದ ಮೂಲಕ ಸಂಪನ್ನಗೊoಡಿರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳು ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯ ಮೂಲಕ ಸ್ಮರಣೀಯವಾಗಿ ನಡೆದಿರುತ್ತದೆ.
ಕರಾಡರು ಸ್ಥಾಪಿಸಿದ ನಾಲ್ಕು ಮಠಗಳಲ್ಲಿ ಆವಳ ಮಠ, ಅಗಲ್ಪಾಡಿ ಮಠ ತೈರೆ ಮಠದೊಂದಿಗೆ ಕೊಂಗೂರು ಮಠ ಕೂಡಾ ಒಂದಾಗಿದೆ. ಈ ದೇವಸ್ಥಾನದಲ್ಲಿ ವಾರ್ಷಿಕ ನವರಾತ್ರಿ ಮಹೋತ್ಸವ, ಕಾರ್ತಿಕ ಪೌರ್ಣಮಿ ಸಮಾರಾಧನೆ, ರಾತ್ರಿ ಮಹಾಪೂಜೆ, ವಸಂತ ಸಮಾರಾಧನೆ, ಮಹಾಪೂಜೆ, ಉಪಾಕರ್ಮ,ಶಿವರಾತ್ರಿ, ಶ್ರೀಕೃಷ್ಣಾಷ್ಟಮಿ, ಚೌತಿ ಆಚರಣೆಗಳು ಯಥಾ ಪ್ರಕಾರ ನಡೆಯುತ್ತವೆ. ಕಾರ್ತಿಕ ಪೂಜೆ, ರುದ್ರಾಭಿಷೇಕ, ಹಾಲು ಪಾಯಸ, ಕುಂಕುಮಾರ್ಚನೆ, ದುರ್ಗಾಪೂಜೆ, ದುರ್ಗಾನಮಸ್ಕಾರ ಪೂಜೆ, ಸತ್ಯನಾರಾಯಣ ಪೂಜೆ ಮಾಡಿಸುವ ಅವಕಾಶಗಳಿವೆ. ನಾಗರಪಂಚಮಿಯನ್ನು ವಿಜೃಂಭಣೆಯಿAದ ಆಚರಿಸಲಾಗುತ್ತದೆ. ಜೀರ್ಣೋದ್ಧಾರದ ಬಳಿಕ ಕ್ಷೇತ್ರ ಬೆಳೆದು ಭಕ್ತಾದಿಗಳ ಜೀವನ ಬೆಳಗಿಸುತ್ತಿದೆ. ಎಂಬ ವಿಶ್ವಾಸ ಈಗ ಎಲ್ಲರಲ್ಲಿದೆ.
ಶ್ರೀ ದುರ್ಗಾಪರಮೇಶ್ವರಿ ಸರ್ವರಿಗೂ ಯಶಸ್ಸು, ಜೀವನದಲ್ಲಿ ತೃಪ್ತಿ ಸಂತೋಷಗಳನ್ನು ನೀಡಲೆಂದು ಪ್ರಾರ್ಥಿಸೋಣ.
- ಶುಭಂ -
- 05
